ತುಳು ಜನಪದ ವಿದ್ವಾಂಸರ ಕುಶಲೋಪಚಾರ ವಿಚಾರಿಸಿದ ಉಡುಪಿ ತಾ. ತುಳುವ ಮಹಾಸಭಾದ ಪದಾಧಿಕಾರಿಗಳು

0
52

ಉಡುಪಿ: ತುಳು ಜನಪದ ವಿದ್ವಾಂಸರು, ಚತುರವಾಗ್ಮಿ, ಪಾದರಸ ವ್ಯಕ್ತಿತ್ವದ ಡಾ. ಗಣನಾಥ ಎಕ್ಕಾರು ಅವರನ್ನು ಉಡುಪಿ ತಾಲೂಕು ತುಳುವ ಮಹಾಸಭಾದ ಪ್ರಧಾನ ಸಂಚಾಲಕರು, ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು ಹಾಗೂ ಸಂಚಾಲಕರಾದ ಸೌಮ್ಯರಾಣಿ ವಿಶ್ವನಾಥ್, ಬಾಲಕೃಷ್ಣ ಕಾರ್ಕಳ, ಉಲ್ಲಾಸ್ ಕಾರ್ಕಳ, ಸುಂದರ್ ಪೆರ್ಡೂರು ಅವರು ಆ. 23ರಂದು ಭೇಟಿ ಮಾಡಿ ಕುಶಲೋಪಚಾರ ವಿಚಾರಿಸಿದರು.

ತುಳುನಾಡಿನಲ್ಲಿ ನಮ್ಮ ಸಂಸ್ಕೃತಿಗೆ, ಆಚಾರ- ವಿಚಾರಕ್ಕೆ ಸಂಬಂಧಿಸಿದ ಪುಸ್ತಕಗಳು ಪ್ರಚಲಿತಕ್ಕೆ ಬರಬೇಕು, ಹಲವಾರು ಉಪಭಾಷೆಗಳಿದ್ದರೂ ನಮ್ಮ ತಾಯ್ನಾಡಿನ ಮಾತೃಭಾಷೆಯಾದ, ಸ್ವತಂತ್ರ ಲಿಪಿ ಹೊಂದಿರುವ ತುಳು ಭಾಷೆಯನ್ನು ಮರೆಯದೆ ಮುನ್ನೆಲೆಗೆ ತರಬೇಕೆಂಬ ಎಸ್.ಯು ಪಣಿಯಾಡಿಯವರ ಕನಸನ್ನು ಪುನಃ ನೆನಪಿಸಿ, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಉಡುಪಿ ತಾಲೂಕು ತುಳು ಮಹಾಸಭಾಕ್ಕೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯನ್ನಿತ್ತರು.

ಗಣನಾಥ ಎಕ್ಕಾರುರವರ ಬದುಕು-ಸಾಧನೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಎಕ್ಕಾರು ಎಂಬಲ್ಲಿ 02-೦6-1962 ರಲ್ಲಿ ಅಕ್ಕಣ್ಣ ಶೆಟ್ಟಿ ಹಾಗೂ ಸುಂದರಿ ಶೆಟ್ಟಿಯವರ ಪುತ್ರರಾಗಿ ಜನಿಸಿದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶ್ರೀ ಕ್ಷೇತ್ರ ಕಟೀಲ್ ನಲ್ಲಿ, ಪದವಿಪೂರ್ವ ಶಿಕ್ಷಣವನ್ನು ಮಂಗಳೂರಿನಲ್ಲಿ, ಪದವಿ ಶಿಕ್ಷಣವನ್ನು ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನಲ್ಲಿ ಹಾಗೂ ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ ಪದವಿ ಹಾಗೂ ವ್ಯಕ್ತಿತ್ಚ ವಿಕಸನದಲ್ಲಿ ಡಿಪ್ಲೋಮ ಪದವಿಯನ್ನು ಸಂಪನ್ನಗೊಳಿಸಿ, “ತುಳುನಾಡಿನ ಜನಪದ ಆಟಗಳು” ಎಂಬ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಮುಡಿಗೇರಿಸಿಕೊಂಡಿರುತ್ತಾರೆ.

ಜಾನಪದ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ 12 ಕೃತಿಗಳನ್ನು ರಚಿಸಿ, 1೦೦ಕ್ಕೂ ಅಧಿಕ ಲೇಖನಗಳ ನಿರ್ಮಾತೃರಾಗಿ, “ರಾಶಿ” ಜಾನಪದ ಪತ್ರಿಕೆ ಹಾಗೂ “ಮದಿಪು” ತುಳು ತ್ರೈಮಾಸಿಕ ಪತ್ರಿಕೆಗಳ ಸಂಪಾದಕರಾಗಿ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ವಿಚಾರ ಸಂಕೀರ್ಣಗಳ ವಿದ್ವತ್‌ಪೂರ್ಣ ಪ್ರಬಂಧ ಮಂಡಿಸಿದ ಕೀರ್ತಿ ಇವರಿಗಿದೆ.

ಪ್ರಪ್ರಥಮವಾಗಿ 1988ರಲ್ಲಿ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಜೀವನಕ್ಕೆ ನಾಂದಿಹಾಡಿದ ಇವರು ಪ್ರಾಧ್ಯಾಪಕರಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ ಹಾಗೂ ಪ್ರಾಂಶುಪಾಲರಾಗಿ ಸರಕಾರಿ ಕಾಲೇಜು ಕಾವೂರು, ಉಡುಪಿಯ ತೆಂಕನಿಡಿಯೂರು ಇಲ್ಲಿ ವಿದ್ಯಾರ್ಥಿಗಳ ಜ್ಞಾನದೀವಿಗೆಗೆ ಭವ್ಯ ಬೆಳಕಾಗಿದ್ದಾರೆ.

ಅಷ್ಟೇ ಅಲ್ಲದೇ, ಎನ್.ಎಸ್.ಎಸ್ ನ ನೋಡಲ್ ಅಧಿಕಾರಿ, ಸಂಯೋಜನಾಧಿಕಾರಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎನ್.ಎಸ್.ಎಸ್‌ನ ಜಂಟಿ ಕಾರ್ಯದಶಿಯಾಗಿ, ಉಡುಪಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕ ಸಂಘದ ಅಧ್ಯಕ್ಷರಾಗಿ, ಕಾಂತಾವರ ಅಲ್ಲಮಪೀಠದ ನಿರ್ದೇಶಕರಾಗಿ, ಕೆಮ್ತೂರು ದೊಡ್ಡಣ್ಣ ಶೆಟ್ಟಿ ಮತ್ತು ಕೆಮ್ಮಲಜೆ ಜಾನಪದ ಪ್ರಕಾಶನದ ಅಧ್ಯಕ್ಷರಾಗಿ, ರಾಜ್ಯಮಟ್ಟದಲ್ಲಿ ಹಲವು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ, ವಿದ್ಯಾರ್ಥಿಗಳಿಗೆ ನಲ್ಮೆಯ ಅಧ್ಯಾಪಕರಾಗಿ ಕನ್ನಡದಲ್ಲಿ ಅದ್ಭುತವಾಗಿ ಕಲಿಸುತ್ತಾ, ಕಲಿಕೆಯಲ್ಲಿ ಆಸಕ್ತಿ ಮೂಡಿಸುತ್ತಾ ತಮ್ಮ ಅಗಾಧ ಪಾಂಡಿತ್ಯವನ್ನು ಧಾರೆ ಎರೆದಿದ್ದಾರೆ.
ಪ್ರಸ್ತುತ ಕರ್ನಾಟಕ ಸರ್ಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷರಾಗಿ, ಭಾರತೀಯ ರೆಡ್ ಕ್ರಾಸ್ ಉಡುಪಿ ಜಿಲ್ಲೆ ಇದರ ಕಾರ್ಯದರ್ಶಿಯಾಗಿ, ಉಡುಪಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಅಭೂತಪೂರ್ವ ಸೇವಾ ಕೈಂಕರ್ಯಗಳನ್ನು ಮನಗಂಡು ಹಲವಾರು ಪ್ರಶಸ್ತಿ-ಪುರಸ್ಕಾರಗಳು ಇವರ ವರ್ಚಸ್ಸಿಗೆ ಅರ್ಹವಾಗಿಯೇ ಸಂದಿದೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಅತ್ಯುತ್ತಮ ಕನ್ನಡ ಉಪನ್ಯಾಸಕ ಪ್ರಶಸ್ತಿ, ಮುಂಬಯಿ ವಿಶ್ವವಿದ್ಯಾನಿಲಯದ ಡಾ.ವರದರಾಜ ಅಧ್ಯ ಚಿನ್ನದ ಪದಕ, ರಾಜ್ಯಮಟ್ಟದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ದಂಪತಿ ಪುರಸ್ಕಾರ, ಕುವೆಂಪು ವಿಶ್ವಮಾನವ ಪ್ರಶಸ್ತಿ, ತುಳುವ ಮಂದಾರ ಪ್ರಶಸ್ತಿ, ವರ್ಷದ ವ್ಯಕ್ತಿ ಪುರಸ್ಕಾರ, ಪತ್ರಿಕಾ ಸೇವಾ ಪುರಸ್ಕಾರ, ರಾಜ್ಯದ ಶ್ರೇಷ್ಠ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಪುರಸ್ಕಾರ ಅಂತೆಯೇ ರಾಷ್ಟ್ರಮಟ್ಟದಲ್ಲಿಯೂ ರಾಷ್ಟ್ರದ ಶ್ರೇಷ್ಠ ಎನ್.ಎಸ್,ಎಸ್ ಸಂಯೋಜನಾಧಿಕಾರಿ ಪ್ರಶಸ್ತಿಯನ್ನು ಘನತೆವೆತ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಪಡೆದು ಜನಪದ, ಸಮಾಜಸೇವೆ, ಸಾಹಿತ್ಯ, ಸಂಘಟನೆ ಮೊದಲಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಅಪರೂಪದ ಸಾಧಕ.

ಚತುರ ವಾಗ್ಮಿ, ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವ, ಸೌಮ್ಯ ಸ್ವಭಾವ, ಜ್ಞಾನದಲ್ಲಿ ಸಂತೋಷವನ್ನು ಜಾಗೃತಗೊಳಿಸುವ ಶ್ರೇಷ್ಠ ಕಲಾವಂತರಾದ ಇವರ ಧರ್ಮಪತ್ನಿ ಶ್ರೀಮತಿ ಡಾ. ನಿಕೇತನರವರೂ ಕೂಡ ಓರ್ವ ಪ್ರಬುದ್ಧ ಸಾಹಿತಿ, ಪ್ರಾಧ್ಯಪಕಿ ಹಾಗೂ ಮಂದಾರ ಕೇಶವ ಭಟ್ಟರ ತುಳು ಮಹಾ ಕಾವ್ಯ “ಮಂದಾರ ರಾಮಾಯಣ” ದ ಸ್ವರೂಪ ಮತ್ತು ಅನನ್ಯತೆಯನ್ನು ವಿಶ್ಲೇಷಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಮುದ್ದಿನ ಮಗಳು ಪ್ರತಿಭಾನ್ವಿತೆ ಶಾಲಿಕಾರನ್ನೊಳಗೊಂಡ ಸುಂದರ ಸಂತೃಪ್ತ ಕುಟುಂಬದ ಸಾರಥಿ. ಯುವಪೀಳಿಗೆಗೆ ಮಾರ್ಗದರ್ಶಕರಾಗಿ ತಮ್ಮೊಳಗಿರುವ ವಿಚಾರಧಾರೆಗಳನ್ನು ಮನಪೂರ್ವಕವಾಗಿ ತಿಳಿಸಿಕೊಡುವ ಸರಳ ಸಜ್ಜನಿಕೆಯ ವ್ಯಕ್ತಿ.
✍ ಸೌಮ್ಯಾ ರಾಣಿ ವಿಶ್ವನಾಥ್

LEAVE A REPLY

Please enter your comment!
Please enter your name here