ಅಪ್ರತಿಮ ಸಾಧಕ, ಗಿನ್ನಿಸ್ ದಾಖಲೆಯ ವೀರ ಸುರೇಂದ್ರ ಆಚಾರ್ಯ ನೂರಾಳ್ ಬೆಟ್ಟು ಇವರನ್ನು ಉಡುಪಿ ತಾಲೂಕು ತುಳುವ ಮಹಾಸಭಾದ ಪ್ರಧಾನ ಸಂಚಾಲಕರು, ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು, ಸಂಚಾಲಕರಾದ ಸೌಮ್ಯ ರಾಣಿ ವಿಶ್ವನಾಥ್ ಪೆರ್ಡೂರು, ಬಾಲಕೃಷ್ಣ ಕಾರ್ಕಳ, ರಕ್ಷಿತ್ ಮುನಿಯಾಲ್ ಹಾಗೂ ರಂಜಿತ್ ಕಾರ್ಕಳ ಅವರು ಆ.೨೪ರಂದು ಭೇಟಿ ಮಾಡಿ ಕುಶಲೋಪಚಾರ ವಿಚಾರಿಸಿದರು.
ತುಳುನಾಡಿನಲ್ಲಿರುವ ಪ್ರತಿಭೆಗಳನ್ನು ಗುರುತಿಸುತ್ತಿರುವ ತುಳು ಮಹಾಸಭಾದ ಕೆಲಸಗಳನ್ನು ಬಹುವಾಗಿ ಶ್ಲಾಘಿಸಿ, ತನ್ನ ಸಂಪೂರ್ಣ ಸಹಕಾರವು ತುಳು ಮಹಾಸಭಾಕ್ಕಿದೆ, ತನ್ನ ಕಲೆಯ ಮುಂದಿನ ನಡೆಯಾದ ತುಳು ನಾಡಿನ ಬಗೆಗಿನ ಮೈಕ್ರೋ ಆರ್ಟ್ ನ ಬಗ್ಗೆ ತುಳು ಮಹಾಸಭಾದ ಸಲಹೆ-ಸೂಚನೆ ಪ್ರೋತ್ಸಾಹ ಅತ್ಯಗತ್ಯವಿದೆ ಎಂದು ತಿಳಿಸಿದರು.
ಬದುಕು ಮತ್ತು ಸಾಧನೆ
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ತೀರಾ ಹಳ್ಳಿ ಪ್ರದೇಶವಾದ ನೂರಳ್ ಬೆಟ್ಟುವಿನಲ್ಲಿ ಲಲಿತ ಹಾಗೂ ಶ್ಯಾಮರಾಯ ಆಚಾರ್ಯರ ಪುತ್ರರತ್ನರಾಗಿ 8/11/1986 ರಲ್ಲಿ ಜನಿಸಿದ ಇವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೂರಾಳ್ ಬೆಟ್ಟುವಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಹೊಸ್ಮಾರಿನ ಸರಕಾರಿ ಪ್ರೌಢಶಾಲೆ, ಬಜಗೋಳಿ ಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಗೈದು, ಕಾರ್ಕಳ ಬೋರ್ಡ್ ಹೈಸ್ಕೂಲ್ ನಲ್ಲಿ ಎಲೆಕ್ಟ್ರಿಕಲ್ ಕೋರ್ಸ್ ಪೂರೈಸಿ, ತದನಂತರ ಫೈರ್ ಅಂಡ್ ಸೇಫ್ಟಿ ಡಿಪ್ಲೋಮಾ ಕೋರ್ಸಿನ ಪ್ರಾವೀಣ್ಯತೆ ಪಡೆದು ಪ್ರಸ್ತುತ ಸಬ್ ಸ್ಟೇಷನ್ ಮೆಸ್ಕಾಂ, ಕಾರ್ಕಳ ಇಲ್ಲಿ ವೃತ್ತಿ ಜೀವನವನ್ನು ಆರಂಭಿಸಿರುತ್ತಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕಲಾ ಸರಸ್ವತಿಯ ಒಲುಮೆಗೆ ಪಾತ್ರರಾದ ಇವರು ಬಾಲ್ಯದಲ್ಲಿಯೇ ಚಿತ್ರಕಲೆ, ಸಂಗೀತ, ಜಲವರ್ಣದ ಕಲಾಕೃತಿ, ಸೀಮೆ ಸುಣ್ಣ, ಸಾಬೂನ್ ನಲ್ಲಿ ವಿವಿಧ ಕಲಾಕೃತಿಗಳನ್ನು ರಚಿಸಿ ಅವರಲ್ಲಿರುವ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಆಸಕ್ತಿ, ಅಭಿರುಚಿಯೊಂದಿಗೆ 2011ರಲ್ಲಿ 2.5 ಸೆಂ. ಮೀ. ಉದ್ದದ ಪೆನ್ಸಿಲ್ ನಲ್ಲಿ ವಿಶ್ವಕಪ್ ಪ್ರತಿಕೃತಿಯನ್ನು ತಯಾರಿಸುವ ಮೂಲಕ ಪ್ರಾರಂಭವಾದ ಇವರ ಪೆನ್ಸಿಲ್ ಸೀಸದೊಂದಿಗಿನ ಪಯಣವು ಮುಂದೆ ಪೆನ್ಸಿಲ್ ಸೀಸದ ವೀಣೆ, ಯೇಸು ಕ್ರಿಸ್ತ, ನರೇಂದ್ರ ಮೋದಿ, ಆದಿ ಶಂಕರಾಚಾರ್ಯರ ಮೂರ್ತಿ, ಸತ್ಯ ಸಾಯಿಬಾಬಾ, ಅಕ್ಕಮಹಾದೇವಿ, ಜಾಗ್ವಾರ್ ಕಾರಿನ ಸಿಂಬಲ್, ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿ ಇಂತಹ ಅಪ್ರತಿಮ ಕಲಾಕೃತಿಗಳು ಇವರ ತಾಳ್ಮೆಯ ಪ್ರತೀಕವಾಗಿ ಕಲೆಯಿಂದ ಶಿಲೆಗಳಾಗಿವೆ. ಇವರ ಕಲಾಕೃತಿಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ರಾಜಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜಗತ್ಪ್ರಸಿದ್ಧ ಧರ್ಮಸ್ಥಳದ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ಕೊಟ್ಟಿರುವುದು ಶ್ಲಾಘನೀಯ. ಅಂತೆಯೇ, ಶೃಂಗೇರಿ ಶಾರದಾಂಬೆಯ ಸನ್ನಿಧಾನದಲ್ಲಿ ಗುರುಗಳು ಆದಿ ಶಂಕರಾಚಾರ್ಯರ ಪ್ರತಿಕ್ರಿತಿಗೆ ಸ್ಥಾನವನ್ನು ನೀಡಿದ್ದಾರೆ ಹಾಗೆಯೇ ಅಂತರಾಷ್ಟ್ರೀಯ ಚಿತ್ರಕಲಾವಿದರಾದ ವಿಲಾಸ್ ನಾಯಕ್ ಹಾಗೂ ಅಂತರಾಷ್ಟ್ರೀಯ ಹಾಕಿಪಟು ವಿ. ಸುನೀಲ್ ರವರು ಇವರ ಅದ್ಭುತ ಕಲಾಕೃತಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಇವರ ಸಾಧನೆಗೆ ಸಂದ ಕಿರೀಟ.
ಏಪ್ರಿಲ್ 7, 2019 ರಂದು 7 ಗಂಟೆಯಲ್ಲಿ ಪೆನ್ಸಿಲ್ ಸೀಸದಲ್ಲಿ 58 ಚೈನ್ ಸರಪಳಿ ಕೊಂಡಿಯನ್ನು ರಚಿಸುವ ಮೂಲಕ ಪಾಕಿಸ್ತಾನದ ಕಲಾವಿದರ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮುರಿದು ನೂತನ ವಿಶ್ವದಾಖಲೆಯನ್ನು ನಿರ್ಮಿಸಿ “ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ನಲ್ಲಿ ತುಳುನಾಡು, ಕರುನಾಡು ಹಾಗೂ ಭವ್ಯ ಭಾರತದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದ್ದಾರೆ. ಇವರ ಈ ಸಾಧನೆಗೆ ಪ್ರಮುಖವಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, “ವಿಶ್ವ ಕುಲ ಕೀರ್ತಿ” ಎಂಬ ಬಿರುದು, ಕಾರ್ಕಳದ ಹೆಮ್ಮೆಯ ಸಾಧಕ ಪ್ರಶಸ್ತಿ, ವಿವೇಕ್ ಪುರಸ್ಕಾರ ಹಾಗೂ ಹತ್ತು ಹಲವಾರು ಕಡೆಗಳಲ್ಲಿ ಗೌರವ ಸನ್ಮಾನ ಪಾರಿತೋಷಕಗಳು ಇವರ ಕಲೆಗೆ ಅರ್ಹವಾಗಿಯೇ ಸಂದಿದೆ. ಇಂತಹ ಯುವ ಕಲಾ ಸರಸ್ವತಿ ಆರಾಧಕರಿಗೆ ಗೌರವಿಸಿ ಪ್ರೋತ್ಸಾಹಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.
ಬರಹ-ಸೌಮ್ಯಾರಾಣಿ ವಿಶ್ವನಾಥ್ ಪೆರ್ಡೂರು

