ತುಳುವಲ್ಡ್ ಫೌಂಡೇಶನ್ ಕಟೀಲ್ ನ ತುಳುವ ಮಹಾಸಭಾದ ಮುಖೇನ ನಡೆಸಲ್ಪಡುತ್ತಿರುವ ಪುರಾತನ ದೇವಾಲಯ, ಪ್ರಸ್ತುತ ಅಜೀರ್ಣಾವಸ್ಥೆಯಲ್ಲಿರುವ ಬಸ್ರೂರುರಿನ ತುಳುವೇಶ್ವರ ದೇವಾಲಯದ ಪುನರುತ್ಥಾನದ ಕಾರ್ಯವನ್ನು ಬಹುವಾಗಿ ಶ್ಲಾಘಿಸಿ, ಇಂತಹ ಪುಣ್ಯಕಾರ್ಯಗಳಿಂದ ಈಗಿನ ಯುವ ಜನತೆಗೆ ತಿಳಿದಿರದ, ಅಳಿವಿನಂಚಿನಲ್ಲಿರುವ ತುಳುನಾಡಿನ ಸಂಸ್ಕೃತಿ ಆಚಾರ-ವಿಚಾರಗಳು ಮುನ್ನೆಲೆಗೆ ಬರುತ್ತದೆ ಇದರಿಂದ ಮುಂದಿನ ಪೀಳಿಗೆಗೆ ಸನ್ಮಾರ್ಗವಾಗುತ್ತದೆ. ನಿಮ್ಮ ಈ ಕಾರ್ಯಗಳು ನಿರ್ವಿಘ್ನವಾಗಿ ಯಶಸ್ವಿಯಾಗಲಿ ಎಂದು ಹಾರೈಸಿ ಉಡುಪಿ ತುಳುವ ಮಹಾಸಭಾಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಶ್ರೀಧರ್ ಪೂಜಾರಿ ತಿಳಿಸಿದರು.
ದೇಶದ ಹೆಮ್ಮೆಯ ಮಾಜಿ ಯೋಧರು, ನಾಟಿ ವೈದ್ಯರಾದ ಶ್ರೀಯುತ ಶ್ರೀಧರ್ ಪೂಜಾರಿ ಹಿರಿಯಡ್ಕ ಇವರನ್ನು ದಿನಾಂಕ 14/09/2025 ರಂದು ಉಡುಪಿ ತಾಲೂಕು ತುಳುವ ಮಹಾಸಭಾದ ಪ್ರಧಾನ ಸಂಚಾಲಕರು, ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು ಹಾಗೂ ಸಂಚಾಲಕರಾದ ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು, ಪ್ರಶಾಂತ್ ಹಿರಿಯಡ್ಕ, ವೈದ್ಯ ಭಾಸ್ಕರ ಪೂಜಾರಿ ಹಿರಿಯಡ್ಕ, ಮಾಲತಿ ಹಿರಿಯಡ್ಕ ಇವರು ತುಳುವ ಮಹಾಸಭಾವನ್ನು ಬಲಪಡಿಸುವ ನಿಟ್ಟಿನಲ್ಲಿ ಭೇಟಿಯನಿತ್ತರು.
ಶ್ರೀಧರ್ ಪೂಜಾರಿ ಹಿರಿಯಡ್ಕ ಯೋಧರ ಜೀವನ-ಸಾಧನಾಗಾಥೆ
ಉಡುಪಿ ಜಿಲ್ಲೆಯ ಮಣಿಪುರದ ದಿ|ಪಿ.ಕೆ ಪೂಜಾರಿ ಹಾಗೂ ಅಕ್ಕಯ್ಯ ಪೂಜಾರ್ತಿಯವರ ಪುತ್ರರಾಗಿ 15/01/1955 ರಲ್ಲಿ ಜನಿಸಿದ ಇವರು ಮಲ್ಪೆಯ ಫೀಶರೀಸ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಂಪನ್ನ ಗೊಳಿಸಿ ನಂತರ “ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಎಂಬ ಮಾತಿನಂತೆ ಹೊತ್ತ ಭಾರತಾಂಬೆಯ ಸೇವೆಗೈಯಲು 28/12/1972 ರಲ್ಲಿ ಭಾರತೀಯ ಭೂಸೇನೆಯಲ್ಲಿ ಸೇರ್ಪಡೆಗೊಂಡರು. ನಂತರ 1973ರ ಜುಲೈನಲ್ಲಿ ಚಂಡೀಗಢದ Air Dispatch Unit, 1975ರಲ್ಲಿ ಲಡಾಕ್, 1977ರಲ್ಲಿ ಅರುಣಾಚಲ ಪ್ರದೇಶ, 1979ರಲ್ಲಿ ನಾಗಲಾಪುರ, 1981ರಲ್ಲಿ ಪುಣೆ, 1983ರಲ್ಲಿ ಜಮ್ಮು-ಕಾಶ್ಮೀರ, 1985ರಲ್ಲಿ ನಾಗಾಲ್ಯಾಂಡ್ ಮತ್ತು ಜಬಲ್ ಪುರ, 1987ರಲ್ಲಿ ಶ್ರೀಲಂಕಾದಲ್ಲಿ ಎಲ್.ಟಿ.ಟಿಯ ವಿರುದ್ಧ ನಡೆದ ಯುದ್ಧದಲ್ಲಿ ಪಾಲ್ಗೊಂಡು ನಂತರ 1989ರಲ್ಲಿ ಸೇನಾ ನಿವೃತ್ತಿಯನ್ನು ಪಡೆದು, 17 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿದ ಕೀರ್ತಿ ಇವರಿಗಿದೆ.
ಸೇನಾ ಸೇವೆಯಿಂದ ನಿವೃತ್ತಿ ಹೊಂದಿದ ನಂತರ 1991 ರಲ್ಲಿ ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗವನ್ನು ನಿರ್ವಹಿಸಿ ಸತತ 24 ವರ್ಷಗಳ ಸೇವೆಯ ನಂತರ 2015 ರಂದು ನಿವೃತ್ತಿ ಹೊಂದಿದ ಇವರು ಕಲಿಯಲು ವಯಸ್ಸಿನ ಹಂಗಿಲ್ಲ ಎಂಬಂತೆ ಜ್ಯೋತಿಷ್ಯ್ಶಾಸ್ತ್ರವನ್ನು ಕರಗತ ಮಾಡಿಕೊಂಡಿದ್ದಲ್ಲದೇ “ಜನಸೇವೆಯೇ ಜನಾರ್ದನ ಸೇವೆ” ಎಂಬ ಧ್ಯೇಯೋದ್ದೇಶದೊಂದಿಗೆ, ನಾಟಿ ವೈದ್ಯರಾದ. ತಮ್ಮ ಮಾವನವರನ್ನೇ ಗುರುವಾಗಿ ಸ್ವೀಕರಿಸಿ ಅವರಿಂದ ಪಾರಂಪರಿಕ ನಾಟಿ ವೈದ್ಯ ಪದ್ಧತಿಯನ್ನು ಕಲಿತು ಪ್ರಸ್ತುತ ಅದೆಷ್ಟೋ ಕಾಯಿಲೆಗಳಿಗೆ, ಸಂತಾನದ ಸಮಸ್ಯೆ ಇರುವವರಿಗೆ ನಾಟಿವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡಿ ಫಲಕಾರಿಯಾಗಿಸಿ, ಆಯುರ್ವೇದವೇ ದಿವ್ಯೌಷಧವೆಂದು ಸಾಬೀತುಪಡಿಸಿದ್ದಾರೆ.
ಇವರ ಇಂತಹ ಅಭೂತಪೂರ್ವ ಸೇವಾ ಕೈಂಕರ್ಯ, ಸಾಧನೆಯನ್ನು ಮನಗಂಡು ಪ್ರಮುಖವಾಗಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಹಿರಿಯಡ್ಕ ಇವರು “ನಾಟಿ ವೈದ್ಯ ಶಿರೋಮಣಿ ಪ್ರಶಸ್ತಿ”, ರೋಟರಿ ಕ್ಲಬ್ ಮಲ್ಪೆ-ಕೊಡವೂರು, ಸತ್ಯದ ತುಳುವೆರ್ ಉಡುಪಿ-ಮಂಗಳೂರು, ಹೀಗೆ ಹಲವಾರು ಪ್ರಶಸ್ತಿಗಳು ಅರ್ಹವಾಗಿಯೇ ಲಭಿಸಿವೆ.
ಶ್ರೀಯುತರ ಸೇವಾ ಕೈಂಕರ್ಯಗಳಿಗೆ ಬಾಳಸಂಗಾತಿಯಾದ ಜಲಜಾಕ್ಷಿ ಜೊತೆಯಾಗಿದ್ದಾರೆ, ಹಾಗೂ ಮಕ್ಕಳಾದ ವಿಘ್ನೇಶ್, ವಿನುತ್ ಹಾಗೂ ಸೊಸೆಯಂದಿರ ತುಂಬು ಕುಟುಂಬದ ಸಾರಥಿಯಾದ ಇವರಿಂದ ಇನ್ನೂ ಸಾವಿರಾರು ಜನರ ಆರೋಗ್ಯ ಸುಧಾರಣೆಯಾಗಲಿ, ಪ್ರಕೃತಿದತ್ತವಾದ ಆಯುರ್ವೇದದ ಪುನರುತ್ಥಾನವಾಗಲಿ ಎಂಬ ಆಶಯ.
ಬರಹ – ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು.