ಉಡುಪಿ : ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ನಗರಸಭೆಗೆ ವಂಚನೆ : ಮಹಿಳೆ ಸಹಿತ ಇಬ್ಬರು ಆರೋಪಿಗಳ ಸೆರೆ

0
35

ಉಡುಪಿ ನಗರಸಭೆಯಲ್ಲಿ ಆಸ್ತಿತೆರಿಗೆ ಪಾವತಿಯಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸರು 24 ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಬಡಗುಬೆಟ್ಟಿನ ಸುಪೇಶ್ ಹಾಗೂ ಕುಂತಳನಗರದ ಶಾಂತಾ ಎಂದು ಗುರುತಿಸಲಾಗಿದೆ. ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಅವರು ಗುರುವಾರ ನೀಡಿದ ದೂರಿನ ಪ್ರಕಾರ, ನಗರಸಭೆ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್‌ನ ನಗರಸಭೆಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಇದೆ. ಫೆ.3ರಂದು ಆಸ್ತಿತೆರಿಗೆ ಪಾವತಿಗಳ ತುಲನೆ ಯಲ್ಲಿ, ಜನವರಿ 28ರಂದು ಪಾವತಿಯಾಗಿದೆ ಎಂದು ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಚಲನ್ ಪತ್ತೆಯಾದರೂ, ಅದೇ ದಿನಾಂಕದ ಬ್ಯಾಂಕ್ ವಿವರ ಪಟ್ಟಿಯಲ್ಲಿ ಪಾವತಿ ದಾಖಲಾಗಿರಲಿಲ್ಲ ಎಂಬುದು ಗಮನಕ್ಕೆ ಬಂದಿದೆ.

ಅದೇ ರೀತಿ ಫೆಬ್ರವರಿ 4ರಂದು ಪರಿಶೀಲನೆ ನಡೆಸಿದಾಗ, ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಕೆಲವು ಚಲನ್‌ಗಳು ಈಗಾಗಲೇ ಜನವರಿ 28ರಂದು ಜನರೇಟ್ ಆಗಿದ್ದ ಅದೇ ಚಲನ್ ಸಂಖ್ಯೆಯನ್ನು ಹೊಂದಿರುವುದು ಪತ್ತೆಯಾಗಿದೆ. ಒಂದೇ ಚಲನ್ ಸಂಖ್ಯೆಗೆ ಎರಡು ಬೇರೆ ಬೇರೆ ದಿನಾಂಕಗಳಲ್ಲಿ ಸೀಲ್ ಹೊಂದಿದ ಚಲನ್‌ಗಳು ದೊರೆತಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಯಾರೋ ಆರೋಪಿಗಳು ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ಆಸ್ತಿತೆರಿಗೆ ಪಾವತಿಸಿದ ಹಣವನ್ನು ವಂಚನೆ ಮಾಡಿರುವ ಶಂಕೆಯ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ವೇಳೆ ಬಡಗುಬೆಟ್ಟು ಕಸ್ತೂರ್‌ಬಾ ನಗರದ ಸುಪೇಶ್ (25) ಹಾಗೂ ಮೂಡು ಅಲೆವೂರು ಕುಂತಲ ನಗರದ ಶಾಂತಾ (43) ಎಂಬಿಬ್ಬರು ಆರೋಪಿಗಳನ್ನು ಕೃಷ್ಣ ಮಠದ ರಾಜಾಂಗಣ ಸಮೀಪ ಬಂಧಿಸಲಾಗಿದೆ.

ಆರೋಪಿಗಳಿಂದ ವಂಚನೆಗೆ ಬಳಸಿದ ಬ್ಯಾಂಕ್ ಸೀಲ್ ಹಾಗೂ ಸಂಬಂಧಿತ ದಾಖಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ (ಪ್ರಬಾರ) ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡು ಆರೋಪಿಗಳನ್ನು ಬಂಧಿಸಲಾಯಿತು.

LEAVE A REPLY

Please enter your comment!
Please enter your name here