
ಪರೀಕ್ಷೆಗೆ ಓದಿ ತಯಾರಿ ನಡೆಸುವಂತೆ ಬುದ್ದಿ ಮಾತು ಹೇಳಿದ್ದಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಉಡುಪಿ ಹಿರೇಬೆಟ್ಟು ಗ್ರಾಮದ ನಿವಾಸಿ, ಉಡುಪಿ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಎರಡನೇ ವರ್ಷದ ಪಿಯುಸಿ ವಿದ್ಯಾರ್ಥಿನಿ ಸಮನ್ವಿ (17) ಆತ್ಮಹತ್ಯೆಗೆ ಶರಣಾದ ಯುವತಿ.
ಆಕೆಯ ತಾಯಿ ಮುಂಬರುವ ಪರೀಕ್ಷೆಗಾಗಿ ಓದುವಂತೆ ತಿಳಿಸಿದ್ದರು. ಸಮನ್ವಿ ಓದದೇ ಫೋನ್ ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಆಕೆಯ ತಾಯಿ ಆಕೆಗೆ ಬುದ್ದಿವಾದದ ಮಾತು ಹೇಳಿ ಓದಲು ತಿಳಿಸಿದ್ದರು. ಅನಂತರ ಸ್ವಲ್ಪ ಹೊತ್ತಿನಲ್ಲಿ ಮನೆಯ ಬೆಡ್ ರೂಂಗೆ ಹೋಗಿ ಚಿಲಕ ಹಾಕಿಕೊಂಡಿದ್ದಳು. ಆಕೆ ಓದುತ್ತಿದ್ದಾಳೆ ಎಂದು ತಾಯಿ ಸುಮ್ಮನಿದ್ದರು. ಅನಂತರ ಆಕೆಯನ್ನು ಕರೆದಾಗ ಆಕೆ ಮಾತನಾಡದೇ ಇದ್ದು ಬಾಗಿಲನ್ನು ದೂಡಿ ಒಳಗೆ ಹೋಗಿ ನೋಡಿದಾಗ ಕೋಣೆಯ ಫ್ಯಾನ್ಗೆ ಸೀರೆಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೂಡಲೇ ಆಕೆಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
