ಏಕತೆ ಮತ್ತು ಸಮಾನತೆಯಿಂದ ಪ್ರಗತಿ : ಎ. ವೀರು ಶೆಟ್ಟಿ
ಬೆಳ್ತಂಗಡಿ : ಗಣತಂತ್ರವೆಂಬ ಸರ್ವೋಚ್ಚ ಅಧಿಕಾರ ನಮ್ಮ (ಜನರ)ಕೈಯಲ್ಲಿದೆ. ನೇರವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಇರುವ ಗಣರಾಜ್ಯ ಹೊಂದಿದ ರಾಷ್ಟದ ಪ್ರಜೆಗಳಾಗಿರುವ ನೀವುಗಳು ಮುಂದಿನ ಮತದಾನ ನೀಡುವ ಅಧಿಕಾರ ಪಡೆಯುವಂತವರು, ಪ್ರತಿಯೊಬ್ಬರು ಮತ ಹಾಕುವ ಪ್ರಜ್ಞೆ ಬೆಳೆಸಿಕೊಳ್ಳಿ ಅದು ನಿಮ್ಮ ಹಕ್ಕು. ವಿವಿಧತೆಯಲ್ಲಿ ಏಕತೆಯ ಭವ್ಯ ಸಂಸ್ಕೃತಿಯ ನಾಡು ನಮ್ಮ ಭಾರತ, ನಮ್ಮ ಸಂವಿಧಾನವು ನಮಗೆ ಎಲ್ಲಾ ಬಗೆಯ ಹಕ್ಕುಗಳನ್ನು ನೀಡಿದೆ ಅದನ್ನು ಉತ್ತಮ ರೀತಿಯಲ್ಲಿ ಚಲಾಯಿಸೋಣ. ಮಾರುಕಟ್ಟೆಯಲ್ಲಿ ಹಣ್ಣಿನ ಗುಣಾತ್ಮಕತೆ ಒಂದೇ ಇದ್ದರೂ ಗೊನೆಯಿಂದ ಕಳಚಿದ ಬಾಳೆಹಣ್ಣು ಬೆಲೆ ಕಳೆದುಕೊಳ್ಳುತ್ತದೆ. ಗೊನೆಸಹಿತ ಬಾಳೆಹಣ್ಣು ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ. ಅದೇ ರೀತಿ ಏಕತೆ ಮತ್ತು ಸಮಾನತೆ ನಮ್ಮ ಧ್ಯೇಯವಾಗಿರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿಯಾಗಿರುವ ಎ. ವೀರು ಶೆಟ್ಟಿಯವರು ಹೇಳಿದರು.

ಅವರು ಉಜಿರೆಯಲ್ಲಿ ಎಸ್.ಡಿ.ಎಂ. ಸನಿವಾಸ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಕರಾದ ಶ್ರೀಯುತ ಲಕ್ಷ್ಮಣ್ ಜಿ. ಡಿ. ಹಾಗೂ ವಸತಿ ನಿಲಯದ ಮುಖ್ಯ ನಿಲಯ ಪಾಲಕರಾದ ಶ್ರೀಯುತ ವಿಶ್ವನಾಥ್ ಸಹಕರಿಸಿದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

