ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬಿ. ವೊಕ್ ಡಿಜಿಟಲ್ ಮೀಡಿಯಾ ಫಿಲ್ಮ್ ಮೇಕಿಂಗ್ ವಿಭಾಗದ ವತಿಯಿಂದ ʼವೆಬ್ ಡೆವಲಪ್ಮೆಂಟ್ ಯೂಸಿಂಗ್ ವರ್ಡ್‌ಪ್ರೆಸ್ʼ ಎರಡು ದಿನಗಳ ಕಾರ್ಯಾಗಾರ ಎಸ್‌ಡಿಎಂ ಪಿಜಿ ಸೆಂಟರ್‌ನಲ್ಲಿ ನಡೆಯಿತು.
ಕಾರ್ಯಾಗಾರದ ಮೊದಲನೇ ದಿನ, ಸಬ್ವೆಬ್ ಕ್ರಿಯೇಶನ್ಸ್‌ನ ಸ್ಥಾಪಕ ಶಶಿಕಾಂತ್ ಶೆಟ್ಟಿ, ವೆಬ್ಸೈಟ್‌ನ ಪ್ರೊಟೋಟೈಪ್ ತಯಾರಿಸುವ ಬಗ್ಗೆ ವಿವರಿಸಿ, ಯುಐ/ ಯುಎಕ್ಸ್ ನ ಪ್ರಾಮುಖ್ಯತೆಯನ್ನು ತಿಳಿಸಿ, ಫಿಗ್ಮಾ ಸಾಫ್ಟ್‌ವೇರ್ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಿದರು. ಎರಡನೇ ದಿನದಂದು ಉಡುಪಿ ವರ್ಡ್‌ಪ್ರೆಸ್ ಕಮ್ಯುನಿಟಿಯ ಸದಸ್ಯರಿಂದ ವರ್ಡ್‌ಪ್ರೆಸ್‌ನಲ್ಲಿ ವೆಬ್ಸೈಟ್ ತಯಾರಿಸುವ ಕುರಿತು ತರಬೇತಿ ನೀಡಿದರು. ಫೋರ್ತ್ ಫೋಕಸ್ ಸಂಸ್ಥೆಯ ಸ್ಥಾಪಕ ಗೌತಮ್ ನಾವಡ, ಆಪರೇಷನ್ ಹೆಡ್ ಚಂದನಾ, ಕೋಟಿಸಾಫ್ಟ್ ಸಂಸ್ಥೆಯ ಸ್ಥಾಪಕ ಓಂಕಾರ್ ಉಡುಪ, ಉಕ್ತ ಡಿಜಿಟಲ್ಸ್ ಸ್ಥಾಪಕ ಮಂಜುನಾಥ್ ಹಾಗೂ ಶಶಿಕಾಂತ್ ಶೆಟ್ಟಿ ಪ್ರಾಯೋಗಿಕ ತರಬೇತಿ ನೀಡಿದರು.
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಗೌತಮ್ ನಾವಡ, ತರಗತಿ, ಪದವಿ, ಅಂಕಗಳು ಎಷ್ಟೇ ಇದ್ದರೂ, ವಿದ್ಯಾರ್ಥಿಗಳು ತಮ್ಮಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ, ಜೀವನ ರೂಪಿಸಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ. ಪದವಿಯ ಜೊತೆಗೆ, ಪ್ರೊಫೈಲ್ ಬಿಲ್ಡ್ ಮಾಡುವ ಕಡೆಯೂ ಗಮನಹರಿಸಬೇಕು” ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಬಿ. ವೊಕ್ ಡಿಜಿಟಲ್ ಮೀಡಿಯಾ & ಫಿಲ್ಮ್ ಮೇಕಿಂಗ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, ವಿದ್ಯಾರ್ಥಿಗಳ ಒಳಿತಿಗಾಗಿ ವಿಭಾಗದ ಕಡೆಯಿಂದ ಇಂತಹ ಕಾರ್ಯಾಗಾರಗಳು, ಅತಿಥಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈ ಮೂಲಕ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ ಹಾಗೂ ಇಂಡಸ್ಟ್ರಿಯ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ” ಎಂದರು.
ಕಾರ್ಯಾಗಾರದ ಸಂಯೋಜಕಿ ಅಶ್ವಿನಿ ಜೈನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಿಂಚನ ಕಾರ್ಯಕ್ರಮವನ್ನು ನಿರೂಪಿಸಿದರು.

