ಉಡುಪಿ : ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಉಡುಪಿ ಸಂತೆಕಟ್ಟೆ, ಗೋಪಾಲಪುರದ ವಿಭಾ ದೇವದಾಸ್ ಮೆಮೋರಿಯಲ್ ಟ್ರಸ್ಟ ನ ದೇವದಾಸ್ ಅಲ್ಟ್ರಾ ಸೌಂಡ್ ಯಂತ್ರವನ್ನು ದಾನವಾಗಿ ನೀಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಸಭಾಂಗಣದಲ್ಲಿ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಹಸ್ತಾಂತರವನ್ನು ಸರ್ಕಾರದ ಪರವಾಗಿ ಸ್ವೀಕರಿಸಿ ಮಾತನಾಡಿ, ವಿಭಾ ಮೆಮೋರಿಯಲ್ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ಗೂ ಹೆಚ್ಚು ಮೊತ್ತದ ಅಲ್ಟ್ರಾ ಸೌಂಡ್ ಯಂತ್ರವನ್ನು ದಾನವಾಗಿ ಜಿಲ್ಲಾ ಆಸ್ಪತ್ರೆಗೆ ನೀಡಿರುವುದು ಬಡಜನರು ಆರೋಗ್ಯ ಚಿಕಿತ್ಸೆ ಯನ್ನು ಪಡೆಯಲು ಒಂದು ಉತ್ತಮ ಕಾರ್ಯವಾಗಿದೆ ಎಂದ ಅವರು ವಿಭಾ ಮೆಮೋರಿಯಲ್ ಟ್ರಸ್ಟ್ ಗೆ ಕೃತಜ್ಞತೆಯನ್ನು ತಿಳಿಸಿದರು.
ಮುಖಂಡರಾದ ಪ್ರಸಾದ್ ಕಾಂಚನ್ ಮಾತನಾಡಿ, ದೇವದಾಸ್ ರವರು ತಮ್ಮ ಮಗಳಾದ ವಿಭಾರವರ ಸವಿನೆನಪಿಗಾಗಿ ಹಾಗೂ ಬಡಜನರ ಸೇವೆಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಅಲ್ಟ್ರಾ ಸ್ಕ್ಯಾನಿಂಗ್ ಯಂತ್ರವನ್ನು ದಾನವಾಗಿ ಜಿಲ್ಲಾ ಆಸ್ಪತ್ರೆಗೆ ನೀಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಜನರ ಉಪಯೋಗವಾಗಬೇಕು ಎಂದ ಅವರು ಸರ್ಕಾರದ ಕೆಲಸ ಕಾರ್ಯಗಳಿಗೆ ಜನಸಾಮಾನ್ಯರ ಸಹ ಭಾಗಿತ್ವದಿಂದ ಉತ್ತಮ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಶೋಕ್ ಕೊಡವೂರು,ಜಿಲ್ಲಾ ಸರ್ಜನ್ ಡಾ. ಅಶೋಕ್ ,ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮ್ ರಾವ್, ಮಾನಸಿಕ ತಜ್ಞ ಡಾ.ವಾಸುದೇವ್ ನಿವಾಸಿ ವೈದ್ಯಾಧಿಕಾರಿ ಡಾ.ಆಮ್ನ ಹೆಗ್ಡೆ, ಶಂಕರ್ ಸಾಲಿಯಾನ್, ದೇವದಾಸ್ ಕುಟುಂಬದ ಸದಸ್ಯರುಹಾಗೂ ಮತ್ತಿತರರು ಉಪಸ್ಥಿತರಿದ್ದರು.

