ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ 5ನೇ ತರಗತಿ ಮಗು, ತಮ್ಮ ತಂದೆ-ತಾಯಿಯಂದಿರು ಕೃಷಿಯಲ್ಲಿ ಅನುಭವಿಸುತ್ತಿರುವ ಕಷ್ಟವನ್ನು ಸಹಿಸಲಾಗದೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ತಂದೆ-ತಾಯಿ ನೀರಿಲ್ಲದೇ ದೂರ ಹೋಗಿ ಕೆಲಸ ಮಾಡುತ್ತಾರೆ. ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಕೆಂಪಯ್ಯನಹಟ್ಟಿ ಗ್ರಾಮದ ವಿದ್ಯಾರ್ಥಿನಿ ವರ್ಣಿಕಾ ಪತ್ರ ಬರೆದು ತನ್ನ ಪೋಷಕರ ಕಷ್ಟದ ಬಗ್ಗೆ ತಿಳಿಸಿದ್ದಾರೆ. ಇದನ್ನು ನಿಮ್ಮ ಟಿವಿ9 ಸುದ್ದಿ ಪ್ರಸಾರ ಮಾಡುತ್ತಿದ್ದಂತೆಯೇ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದಾರೆ.
ಸಿಎಂಗೆ ಬರೆದ ಪತ್ರದಲ್ಲೇನಿದೆ?
“ಇತ್ತೀಚಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಮಳೆಯ ಕೊರತೆಯಿಂದಾಗಿ ಅಂತರ್ಜಲ ಕುಸಿದಿದೆ.ಈ ಕಾರಣದಿಂದ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳು ನಿಂತಂತಾಗಿದ್ದು, ಜನರು ಬೇಸಾಯ ಬಿಟ್ಟು ಉದ್ಯೋಗಕ್ಕಾಗಿ ಇತರೆ ಕಡೆಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಸ್ಥಿತಿಯನ್ನು ನೋಡಿದಾಗ ನಮ್ಮ ಮನಸ್ಸು ತೀವ್ರವಾಗಿ ದುಃಖಗೊಂಡಿದೆ,” ಎಂದು ತಿಳಿಸಿದ್ದಾರೆ. ಅಲ್ಲದೇ ಹನೂರು ತಾಲೂಕಿನ ರಾಮಾಪುರ ಹೋಬಳಿಯ ಎಲ್ಲ ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಕೈಗೊಳ್ಳಬೇಕು. ಈ ಮೂಲಕ ಭೂಮಿಯಲ್ಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ, ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಪತ್ರದ ಮೂಲಕ ಸಿಎಂಗೆ ಮನವಿ ಮಾಡಿದ್ದಾರೆ.
ಇನ್ನೂ ಹನೂರು ಭಾಗದಲ್ಲಿ ನೀರಿನ ಸಮಸ್ಯೆ ಬಗ್ಗೆ ಶಾಸಕ ಮಂಜುನಾಥ್ ಕೂಡ ಒಪ್ಪಿಕೊಂಡಿದ್ದಾರೆ. ಶೇ 40 ರಷ್ಟು ಮಳೆ ಕೊರತೆಯಾಗಿದೆ.ಈಗಾಗಲೇ ಕುಡಿಯುವ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ಶಾಶ್ವತ ನೀರಾವರಿಗಾಗಿ ಯೋಜನೆ ರೂಪಿಸಬೇಕಿದೆ. ನಮ್ಮ ಭಾಗದಲ್ಲಿ ಮುಂಗಾರು ಮಳೆಯಾಗುವುದಿಲ್ಲ,ಹಿಂಗಾರು ವೇಳೆ ಮಳೆ ಬೀಳುತ್ತದೆ.ಸದ್ಯ ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕೂಡ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
ಗ್ರಾಮಕ್ಕೆ ಅಧಿಕಾರಿಗಳು ದೌಡು
ಚಾಮರಾಜನಗರ ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಭೇಟಿ ನೀಡಿದ್ದು, ಸಮಸ್ಯೆ ಬಗೆಹರಿಸಲು ಸಿಇಒ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದದಾರೆ. ಇನ್ನು ಜನರ ಬಳಿಗೆ ತೆರಳಿ ಸಮಸ್ಯೆ ಆಲಿಸಿದ ಸಿಇಒ ಮೋನಾರೋತ್, ಕುಡಿಯುವ ನೀರು ಪೂರೈಸಲು ಪ್ರತ್ಯೇಕ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಜೊತೆಗೆ ನದಿಯಿಂದ ನೀರು ತುಂಬಿಸುವ ಬಗ್ಗೆ ಸರ್ಕಾರದ ಜೊತೆಗೆ ಚರ್ಚಿಸುವುದಾಗಿ ತಿಳಿಸಿದರು.
ಒಟ್ಟಿನಲ್ಲಿ ಪುಟ್ಟ ಮಕ್ಕಳ ಚಿಂತನೆ ಜನರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಸಿಎಂ ಸಿದ್ದರಾಮಯ್ಯ ಮಕ್ಕಳ ಮನವಿ ಸ್ಪಂದಿಸ್ತಾರಾ? ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಸಿಗುತ್ತಾ ಎನ್ನುವುದನ್ನು ಕಾದುನೋಡಬೇಕಾಗಿದೆ.