ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಸೆಲ್ಕೋ ಗೆ ಅಭಿನಂದನೆ

0
12


ಇತ್ತೀಚೆಗಷ್ಟೇ ಇಂಗ್ಲೆಂಡ್ ದ ಪ್ರತಿಷ್ಠಿತ ಗ್ರೀನ್ ಆಸ್ಕರ್ – ಐಶ್ಡನ್ ಪ್ರಶಸ್ತಿಯಿಂದ ವಿಶ್ವದಲ್ಲಿಯೇ 3ನೆಯ ಸಲ ಗುರುತಿಸಲ್ಪಟ್ಟ ಭಾರತದ ಸೆಲ್ಕೋ ಸೋಲಾರ್ ಸಂಸ್ಥೆಯ ಸಾಧನೆಯನ್ನು ಕೇಂದ್ರ ಪರ್ಯಾಯ ಇಂಧನ ಸಚಿವ ಶ್ರೀ ಪ್ರಹ್ಲಾದ ಜೋಶಿ ಅವರು ಶ್ಲಾಘಿಸಿ ಅಭಿನಂದಿಸಿದ್ದಾರೆ. ವಿಕೇಂದ್ರೀಕೃತ ಸೌರ ವಿದ್ಯುತ್ ಬಳಕೆಯಿಂದ ಬಡತನ ನಿವಾರಿಸುವಲ್ಲಿ ಸೆಲ್ಕೋ ಸಂಸ್ಥೆಯ ನಿಲುವು ಹಾಗು ಕಳೆದ 3 ದಶಕಗಳಲ್ಲಿ ಸಂಸ್ಥೆ ಸಾಗುತ್ತಿರುವ ರೀತಿಯನ್ನು ಪ್ರಸ್ತಾಪಿಸಿದ ಅವರು, ಇಂದು ದೆಹಲಿಯಲ್ಲಿ ತಮ್ಮ ಕಚೇರಿಯಲ್ಲಿ ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಮೋಹನ್ ಭಾಸ್ಕರ್ ಹೆಗಡೆ ಹಾಗೂ ಡಿಜಿಎಂ ಶ್ರೀ ಗುರುಪ್ರಕಾಶ ಶೆಟ್ಟಿ ಅವರನ್ನು ಅಭಿನಂದಿಸಿದರು.  

ಈ ಸಂದರ್ಭದಲ್ಲಿ ಮೋಹನ್ ಹೆಗಡೆಯವರು ಮಾತನಾಡಿ  ಸೆಲ್ಕೋ ಸಂಸ್ಥೆ ಯ ಮೂಲ ಚಿಂತನೆ ಎಂದರೆ, ಜೀವನಾಧಾರ ಉತ್ಪನ್ನಗಳು ಕೌಶಲ್ಯಾಧಾರಿತವಾಗಿ ಸೌರ ವಿದ್ಯುತ್ತಿನಿಂದ ಅಥವಾ ಪರ್ಯಾಯ ಶಕ್ತಿಯಿಂದ ನಡೆಯುವಂತಾಗ ವಿದ್ಯುತ್ ಉಳಿತಾಯ, ಸ್ವಾವಲಂಬಿ ಬದುಕು ಜೊತೆಯಲ್ಲಿ ಉದ್ಯೋಗ ಸೃಷ್ಟಿ ಸಾಧ್ಯ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಈ ಕುರಿತಾದ ಸಾಧ್ಯತೆಯ ವರದಿಯನ್ನು ಸಚಿವರಿಗೆ ನೀಡಿದರು. ಇದನ್ನು ಮೆಚ್ಚಿದ ಸಚಿವರು ಈ ರೀತಿಯ ಕೌಶಲ್ಯಾಧಾರಿತವಾದ ಉತ್ಪನ್ನಗಳ ಹಾಗೂ ಸರಕಾರದ ಬೇರೆ ಬೇರೆ ಯೋಜನೆಗಳ ಸಾಧ್ಯಾಸಾಧ್ಯತೆಗಳನ್ನು ವಿಸ್ತೃತವಾಗಿ ನೀಡುವಂತೆ ಸಲಹೆ ನೀಡಿದರು. ಅವರು ಸಂಸ್ಥೆಯ ಸಂಸ್ಥಾಪಕ ಹರೀಶ್ ಹಂದೆ ಅವರ ವೈಜ್ಞಾನಿಕ ದೃಷ್ಟಿಕೋನ ಹಾಗೂ ದೂರ ದೃಷ್ಟಿಯ ಚಿಂತನೆಗಳನ್ನು ಶ್ಲಾಘಿಸಿ, ಸೆಲ್ಕೋಕ್ಕೆ ಸಂದ ಪ್ರಶಸ್ತಿ ನಮ್ಮ ರಾಜ್ಯಕ್ಕೆ ದೇಶಕ್ಕೆ ಅಭಿಮಾನದ ಸಂಗತಿ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಇಂಧನ ಕ್ಷೇತ್ರದ ಸ್ವಾವಲಂಬಿತನಕ್ಕೆ ಹಾಗೂ ಆತ್ಮ ನಿರ್ಭರ ತತ್ವಕ್ಕೆ ನಿಮ್ಮ ಕೆಲಸ ಪೂರಕವಾಗಿದೆ ಎಂದು ಸಹ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಸಚಿವರೊಂದಿಗೆ ಸೆಲ್ಕೋ ಸಿ ಇ ಓ ಮೋಹನ ಭಾಸ್ಕರ ಹೆಗಡೆ ಹಾಗೂ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ಅವರನ್ನು ಕಾಣಬಹುದು.

LEAVE A REPLY

Please enter your comment!
Please enter your name here