ನ. 11 ರಂದು ಏಕತಾ ನಡಿಗೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ

0
21


ಉಡುಪಿ: ಸರ್ದಾರ್ ವಲ್ಲಬಾಯಿ ಪಟೇಲ್ ಅವರ 150 ನೇ ಜನ್ಮ ದಿನದ ಅಂಗವಾಗಿ ನವೆಂಬರ್ 11 ರಂದು ನಗರದ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಭುಜಂಗ ಪಾರ್ಕಿನ ಹುತಾತ್ಮರ ಯುದ್ಧ ಸ್ಮಾರಕದವರೆಗೆ ಏಕತಾ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕತಾ ನಡಿಗೆ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬೆಳಗ್ಗೆ 7.30 ಕ್ಕೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಏಕತಾ ನಡಿಗೆ ಜಾಥಾಗೆ ಚಾಲನೆ ನೀಡಲಾಗುವುದು. ಜಾಥಾ ಸಮಾರೋಪಗೊಳ್ಳುವ ಭುಜಂಗ ಪಾರ್ಕಿನ ಗಾಂಧಿಕಟ್ಟೆಯಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಜೀವನ ಸಾಧನೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಏಕತಾ ನಡಿಗೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು, ಎನ್.ಎಸ್.ಎಸ್., ಎನ್.ಸಿ.ಸಿ ಸ್ವಯಂ ಸೇವಕರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು, ಸಂಘ-ಸAಸ್ಥೆಗಳು, ಯುವಕ-ಯುವತಿ ಮಂಡಳಗಳು, ಮಾಜಿ ಸೈನಿಕರು ಸೇರಿದಂತೆ ಮತ್ತಿತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ ಕಾಲ್ನಡಿಗೆ ಜಾಥಾವನ್ನು ಯಶಸ್ವಿಗೊಳಿಸಲು ಸಹಕರಿಬೇಕು ಎಂದರು.
ಜಾಥಾ ಸಂದರ್ಭದಲ್ಲಿ ವಿವಿಧ ಕಲಾತಂಡಗಳು, ಎನ್.ಸಿ.ಸಿ ಅಥವಾ ಶಾಲಾ ಮಕ್ಕಳಿಂದ ಬ್ಯಾಂಡ್ ಗಳನ್ನು ಆಯೋಜಿಸಿ ಜಾಥಾಕ್ಕೆ ಇನ್ನಷ್ಟು ಮೆರುಗು ನೀಡಬೇಕು. ಜಾಥಾ ಹಾದುಹೋಗುವ ಮಾರ್ಗದುದ್ದಕ್ಕೂ ಸರ್ದಾರ್ ವಲ್ಲಬಾಯಿ ಪಟೇಲ್ ಬಗ್ಗೆ ಘೋಷವಾಕ್ಯಗಳನ್ನು ಕೂಗುತ್ತಾ ಸಾಗುವಂತೆ ನೋಡಿಕೊಳ್ಳಬೇಕು ಎಂದ ಅವರು ಆರೋಗ್ಯ ಇಲಾಖೆಯ ವತಿಯಿಂದ ವೈದ್ಯಕೀಯ ಸಿಬ್ಬಂದಿಗಳನ್ನು ಒಳಗೊಂಡ ಆಂಬುಲೆನ್ಸ್ ವ್ಯವಸ್ಥೆಯನ್ನು ಸ್ಥಳದಲ್ಲಿ ನಿಯೋಜಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಡಿಹೆಚ್‌ಓ ಡಾ. ಬಸವರಾಜ್ ಹುಬ್ಬಳ್ಳಿ, ಕಾರ್ಯಕ್ರಮ ಸಂಯೋಜಕ ಉಲ್ಲಾಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here