ವಿದ್ಯಾರ್ಥಿಗಳು ಅಂಕ ಗಳಿಸುವುದರೊಂದಿಗೆ ಸಂಸ್ಕಾರವನ್ನು ಪಡೆದುಕೊಂಡಾಗ ಶಿಕ್ಷಣಕ್ಕೆ ಮೌಲ್ಯ ಬರುತ್ತದೆ. ಸಂಸ್ಕಾರವಂತ ವಿದ್ಯಾರ್ಥಿಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಿಳಿಸಿದರು.
ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದರ ಸಂಕಲ್ಪದಂತೆಅದಮಾರು ಮಠದ ಶ್ರೀ ವಿಭೂದೇಶ ತೀರ್ಥ ಚಾರಿಟೇಬಲ್ ಟ್ರಸ್ಟ್ ಮೂಲಕ ಶಾಂತಿನಿಕೇತನದ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ನಡೆಯುತ್ತಿರುವ ಮೌಲ್ಯಯುತ ಸಂಸ್ಕಾರ ಶಿಕ್ಷಣ ಬೇಸಿಗೆ ಶಿಬಿರವನ್ನು ಉಡುಪಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಹೆತ್ತವರನ್ನು ಗೌರವಿಸುವ ನಿತ್ಯಪರಿಪಾಠ ನಮ್ಮದಾಗಬೇಕು. ಎಲ್ಲರೂ ಅಂಕಗಳಿಗೆ ಶಿಕ್ಷರನ್ನು ಗೌರವಿಸುತ್ತಾರೆ ಆದರೆ ಮೌಲ್ಯಯುತ ವಿಚಾರಗಳನ್ನು ಅರಿತು ಸಂಸ್ಕಾರವಂತರಾಗಿ ಗೌರವಿಸುವುದು ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು.
ಶಾಂತಿನಿಕೇತನದ ಸಂಸ್ಥಾಪಕ ರಾಜೇಶ್ ಮಾತನಾಡಿ ಶಾಂತಿನಿಕೇತನದ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಬಿರ ಮಾಡಿರುವುದಕ್ಕೆ ಧನ್ಯವಾದಗಳು. ನಮ್ಮ ವಿದ್ಯಾರ್ಥಿಗಳು ಇಂದಿಗೂ ಲೇಸ್, ತಂಪು ಪಾನೀಯಗಳನ್ನು ಸೇವಿಸದೆ ಬೇಸಿಗೆ ಶಿಬಿರದಲ್ಲಿ ಹೇಳಿದ್ದನ್ನು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇಲ್ಲಿ ಸಿಗುವ ಮೌಲ್ಯ ಪಡೆಯಿರಿ ಎಂದು ಹೇಳಿದರು.
ಶಿಬಿರದ ವ್ಯವಸ್ಥಾಪಕ ಗೋವಿಂದರಾಜು ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ನೀತಿ ಕಥೆಗಳ ಪುಸ್ತಕ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿ ಓಂ ಪ್ರಕಾಶ ಭಟ್ ಕಾರ್ಯಕ್ರಮ ನಿರೂಪಿಸಿದರು.