ವೇಣೂರು: ವೇಣೂರಿನ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಪುಟ್ಟ ಊರಿನಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕ್ಷೇತ್ರಪಾಲಕರಾದ ಒಂಬತ್ತು ಗುಳಿಗ ದೈವಗಳಿಗೆ ಏಕಕಾಲದಲ್ಲಿ ನರ್ತನ ಸೇವೆ ಸಲ್ಲಿಸಲಾಯಿತು. ಇದು ತುಳುನಾಡಿನಲ್ಲಿ ಬಹಳ ಅಪರೂಪದ ಘಟನೆಯಾಗಿದೆ. ತುಳುನಾಡಿನಲ್ಲಿ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ದೈವಾರಾಧನೆ.

ಸಾಮಾನ್ಯವಾಗಿ ಎಲ್ಲಾ ಕಡೆ ಒಂದೆರಡು ಗುಳಿಗ ದೈವಗಳಿಗೆ ನರ್ತನ ಸೇವೆ ನಡೆಯುತ್ತೆ. ಆದರೆ ಈ ಸನ್ನಿಧಾನದಲ್ಲಿ ಏಕಕಾಲದಲ್ಲಿ ಒಂಬತ್ತು ದೈವಗಳಿಗೆ ನೇಮೋತ್ಸವ ನಡೆಯುತ್ತದೆ. ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿಯ ಕ್ಷೇತ್ರಪಾಲಕರಾಗಿ ಒಂಬತ್ತು ಗುಳಿಗ ದೈವಗಳು ನೆಲೆಯಾಗಿರುವ ಕಾರಣ ಇಲ್ಲಿ ವಾರ್ಷಿಕ ಉತ್ಸವದ ವೇಳೆ ನವ ಗುಳಿಗನಿಗೆ ನರ್ತನ ಸೇವೆ ಸಲ್ಲಿಸಲಾಗುತ್ತದೆ.

ಸಾಮಾನ್ಯವಾಗಿ ದೇವಿ ನೆಲೆಸಿರುವ ಕ್ಷೇತ್ರಗಳಲ್ಲಿ ಕ್ಷೇತ್ರಪಾಲಕನಾಗಿ ಗುಳಿಗ ಇದ್ದೆ ಇರುತ್ತಾನೆ. ಇಂತಹ ಕ್ಷೇತ್ರಗಳಲ್ಲಿ ವಾರ್ಷಿಕವಾಗಿ ಗುಳಿಗನಿಗೆ ನರ್ತನ ಸೇವೆಯನ್ನು ಸಲ್ಲಿಸಲಾಗುತ್ತದೆ. ಇನ್ನು ತುಳುನಾಡಿನ ಹೆಚ್ಚಿನ ಜನರ ಮನೆಯಲ್ಲೂ ಈ ಗುಳಿಗನ ಆರಾಧನೆ ನಡೆಯುತ್ತದೆ. ಆದರೆ ಆರು ವರ್ಷಗಳ ಹಿಂದೆ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಊರಿನಲ್ಲಿ ಪುನರ್ ನಿರ್ಮಾಣವಾದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಆ ಒಂಬತ್ತು ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ. ತುಳುನಾಡಿನಲ್ಲಿ ಇದು ಬಹಳ ಅಪರೂಪವಾಗಿದ್ದು, ಇದನ್ನು ವೀಕ್ಷಿಸುವುದಕ್ಕೆ ದೂರದ ಊರುಗಳಿಂದಲೂ ಜನ ಬಂದಿದ್ದರು.
ಈ ಕ್ಷೇತ್ರದಲ್ಲಿ ಪ್ರಾರ್ಥಿಸಿ ಹೋದವರಿಗೆ ಎದುರಾಗುವ ಎಲ್ಲಾ ಸಂಕಷ್ಟಗಳು ನಿವಾರಣೆ ಆಗುತ್ತೆ ಎನ್ನುವ ನಂಬಿಕೆ ಕೂಡ ಇದೆ. ಹೀಗಾಗಿ ಜಿಲ್ಲೆ ಮಾತ್ರವಲ್ಲದೇ ಹೊರಜಿಲ್ಲೆಯಿಂದಲೂ ಸಾಕಷ್ಟು ಭಕ್ತರು ವಾರ್ಷಿಕ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

