ಚಿಕ್ಕಮಗಳೂರು : ಮಲಗಿದ್ದ ದಂಪತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ವ್ಯಕ್ತಿಗೆ ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಗೋವಿಂದಪ್ಪ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದು, ನರಸಿಂಹರಾಜಪುರ ತಾಲೂಕು ಕುಸಬೂರು ಗ್ರಾಮದ ಸಾತ್ಕೊಳಿ ಸಮೀಪ 2019ರಲ್ಲಿ ಘಟನೆ ನಡೆದಿತ್ತು.
ಧರ್ಮಯ್ಯ ಎಂಬುವರ ಪತ್ನಿ ಭಾರತಿ ಜೊತೆಗೆ ಗೋವಿಂದಪ್ಪ ಅಕ್ರಮ ಸಂಬಂಧ ಹೊಂದಿದ್ದ. ಈ ವಿಷಯ ತಿಳಿದ ಅಣ್ಣ-ತಮ್ಮಂದಿರು ಭಾರತಿಗೆ ಬುದ್ಧಿವಾದ ಹೇಳಿದ ನಂತರ ಗೋವಿಂದಪ್ಪನ ಜೊತೆಗಿನ ಅಕ್ರಮ ಸಂಬಂಧದಿಂದ ದೂರವಾಗಿದ್ದರು.
ತನ್ನ ಆಕ್ರಮ ಸಂಬಂಧಕ್ಕೆ ಪತಿ ಧರ್ಮಯ್ಯ ಅಡ್ಡಿಯಾಗಿದ್ದಾನೆಂದು ಆಕ್ರೋಶಗೊಂಡಿದ್ದ ಗೋವಿಂದಪ್ಪ 2019ರ ಆಗಸ್ಟ್ 30ರಂದು ಧರ್ಮಯ್ಯನ ಮನೆ ಹಿಂಬಾಗಿಲಿನಿಂದ ನುಗ್ಗಿ ಮಲಗಿದ್ದ ದಂಪತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಎನ್‌ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಿದ ಸಿಪಿಐ ಜೆ, ಮಂಜು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯ ವೇಳೆ ಗೋವಿಂದಪ್ಪ ಕೃತ್ಯ ಎಸಗಿರುವುದು ಸಾಬೀತಾಗಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರು ಗೋವಿಂದಪ್ಪನಿಗೆ ಮರಣದಂಡನೆ ಶಿಕ್ಷೆ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತನಿಖಾ ಸಹಾಯಕ ಪಿಎಸ್‌ಐ ರವಿ, ಹೆಡ್ ಕಾನ್ಸ್ ಟೇಬಲ್ ಎನ್. ರಾಮಪ್ಪ ನ್ಯಾಯಾಲಯದ ಕರ್ತವ್ಯ ನಿರ್ವಹಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ. ವೀಣಾ ವಾದ ಮಂಡಿಸಿದ್ದರು.

