ಹಿರಿಯ ರಂಗನಟ ರಾಜು ತಾಳಿಕೋಟೆ ಹೃದಯಾಘಾತದಿಂದ ಮೃತ್ಯು

0
1


ಉಡುಪಿ: ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ(59) ಸೋಮವಾರ ಸಾಯಂಕಾಲ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶೈನ್​ ಶೆಟ್ಟಿ ನಟನೆಯ ಹೊಸ ಸಿನಿಮಾ ಶೂಟಿಂಗ್​ನಲ್ಲಿ ಭಾಗವಹಿಸಲು ರಾಜು ತಾಳಿಕೋಟೆ ಅವರು ಉಡುಪಿಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ಭಾನುವಾರ ರಾತ್ರಿ ವಿಶ್ರಾಂತಿ ಪಡೆಯುತ್ತಿರುವಾಗ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆದರೆ ಚಿಕಿತ್ಸೆ ಲಕಾರಿಯಾಗದೆ ನಿಧನರಾಗಿದ್ದಾರೆ. ಧಾರವಾಡ ರಂಗಾಯಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಹಾಸ್ಯ ನಟನಾಗಿ, ರಂಗಕರ್ಮಿಯಾಗಿ ಅವರು ಗುರುತಿಸಿಕೊಂಡಿದ್ದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ನಂತರ ತಾಳಿಕೋಟೆ ನಗರದಲ್ಲಿ ವಾಸವಾಗಿದ್ದರು. ನಿರ್ದೇಶಕ ಯೋಗರಾಜ್​ ಭಟ್​ ಅವರ ಮನಸಾರೆ (2009) ಚಿತ್ರದ ಮೂಲಕ ಅವರು ಜನಪ್ರಿಯತೆ ಗಳಿಸಿದ್ದರು. ನಂತರ ಪಂಚರಂಗಿ, ಮತ್ತೊಂದ್​ ಮದುವೇನಾ..! ಮತ್ತು ಮೈನಾ ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಬಿಗ್​ ಬಾಸ್​ ಸೀಸನ್​ 7ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here