ದೇವಸ್ಥಾನವನ್ನು ಹೂವುಗಳಿಂದ ವಿಶೇಷವಾಗಿ ಶೃಂಗಾರ : ಭಕ್ತಸಮೂಹದ ಮೆಚ್ಚುಗೆ
ಹೆಬ್ರಿಯ ಇತಿಹಾಸ ಪ್ರಸಿದ್ಧ ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ ವೈಭವದಲ್ಲಿ ನಡೆದ ವಿಶ್ವರೂಪ ದರ್ಶನ ವನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ದೀಪ ಬೆಳಗಿ ಚಾಲನೆ ನೀಡಿದರು
ಸರತಿ ಅರ್ಚಕರಾದ ವೇದಮೂರ್ತಿ ಎಚ್. ನಾಗರಾಜ ಜೋಯಿಸ್ ನೇತ್ರತ್ವದಲ್ಲಿ ವಿಶ್ವರೂಪ ದರ್ಶನದ ಪೂಜೆಯ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ದೀಪಾವಳಿಯ ಸುಸಂದರ್ಭದಲ್ಲಿ ನಡೆದ ವಿಶ್ವರೂಪದರ್ಶನ ಕಂಡು ಜಿಲ್ಲಾಧಿಕಾರಿ ಸ್ವರೂಪ ಅವರು ಸಂತಸಗೊಂಡರು. ಹಿರಿಯರಾದ ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್ ಕಲ್ಪನೆಯಲ್ಲಿ ದೇವಸ್ಥಾನವನ್ನು ಹೂವುಗಳಿಂದ ವಿಶೇಷವಾಗಿ ಶೃಂಗರಿಸಿದ್ದು ಭಕ್ತಸಮೂಹದ ಮೆಚ್ಚುಗೆಗೆ ಪಾತ್ರವಾಯಿತು. ದೇವರ ಪ್ರಸಾದದ ಜೊತೆಗೆ ಭಾಸ್ಕರ ಜೋಯಿಸ್ ನೇತ್ರತ್ವದಲ್ಲಿ ಭಕ್ತಸಮೂಹಕ್ಕೆ ವಿಶೇಷ ಲಡ್ಡು ವಿತರಿಸಲಾಯಿತು. ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ದೇವಸ್ಥಾನದಲ್ಲಿ ವಿಶೇಷ ಪ್ರಸಾದ ನೀಡಿ ಗೌರವಿಸಲಾಯಿತು. ಹೆಬ್ರಿಯ ಇತಿಹಾಸ ಪ್ರಸಿದ್ಧ ಶ್ರೀಅನಂತ ಪದ್ಮನಾಭ ದೇವಸ್ಥಾನದ ಆಡಳಿತ ಮೋಕ್ತೇಸರ ಎಚ್. ತಾರಾನಾಥ ಬಲ್ಲಾಳ್, ಸಮಿತಿಯ ಸದಸ್ಯರು, ಹಿರಿಯರಾದ ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್, ವಿವಿಧ ಪ್ರಮುಖರಾದ ಸಮಾಜ ಸೇವಕ ಬೈಕಾಡಿ ಮಂಜುನಾಥ ರಾವ್ ಶಿವಪುರ, ಟಿ.ಜಿ.ಆಚಾರ್ಯ ಹೆಬ್ರಿ , ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಬಂಗೇರ ಸಹಿತ ವಿವಿಧ ಪ್ರಮುಖರು, ಗಣ್ಯರು, ನೂರಾರು ಭಕ್ತಸಮೂಹ ವೈಭವದ ವಿಶ್ವರೂಪ ದರ್ಶನಕ್ಕೆ ಸಾಕ್ಷಿಯಾದರು.