ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಕಲಾ ಸಂಘದ ವಿವಿಧ ಚಟುವಟಿಕೆಗಳ ಮುನ್ನುಡಿಯಾಗಿ ಸಂಘದ ಉದ್ಘಾಟನೆ ನೆರವೇರಿಸಲಾಯಿತು.
ವಿವೇಕಾನಂದ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಅನಿತಾ ಕಾಮತ್ ಕೆ. ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿಕೊಟ್ಟರು. ಬಳಿಕ ಮಾತನಾಡಿದ ಅವರು ಕಲಾವಿಭಾಗ ಎಂಬುದು ಇತಿಹಾಸ, ಪರಂಪರೆ, ಸಂಸ್ಕೃತಿ, ದೇಶದ ಆರ್ಥಿಕ ಪರಿಸ್ಥಿತಿ, ವ್ಯವಹಾರ, ಅಭಿವೃದ್ಧಿ, ರಾಜಕೀಯ ವ್ಯವಸ್ಥೆಗಳು, ಸಮಾಜದ ಬಾಂಧವ್ಯ ಮುಂತಾದ ವೈವಿಧ್ಯಮಯ ವಿಷಯಗಳ ಸಾಗರ. ಕಲೆಯಿಂದ ಸೃಜನಶೀಲತೆ ಬೆಳೆಯುತ್ತದೆ. ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಪ್ರತಿಭೆಗಳು ಅಡಗಿವೆ. ಅವುಗಳ ಅನಾವರಣವಾಗಬೇಕಾದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಹಿಂಜರಿಯದೆ, ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡು ಹೆಜ್ಜೆಯನ್ನು ಮುಂದಿಡಬೇಕು. ವಿದ್ಯಾರ್ಥಿಗಳಲ್ಲಿ ಮಾನವಿಕ ಮೌಲ್ಯಗಳ ಬೆಳವಣಿಗೆ, ಇತರರ ಭಾವನೆಗೆ ಸ್ಪಂದಿಸುವ ಮನಸ್ಸು ಇರಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ. ಎಂ ವಹಿಸಿಕೊಂಡರು. ವೇದಿಕೆಯಲ್ಲಿ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ಹಾಗೂ ಕಲಾ ಸಂಘದ ಅಧ್ಯಕ್ಷರಾದ ಅನೂಪ್ ರೈ . ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಅನೂಪ್ ರೈ ಸ್ವಾಗತಿಸಿ, ಬಿಂದು ಕೆ. ಜೆ ವಂದಿಸಿದರು. ಚಿನ್ಮಯ ಎಸ್. ಸೇಮಿತ ಕಾರ್ಯಕ್ರಮವನ್ನು ನಿರೂಪಿಸಿದರು.