ಭಾರತದ ಸ್ಟಾರ್ಟ್‌ಅಪ್ ರಾಜಧಾನಿಯಾದ ಬೆಂಗಳೂರಿನಲ್ಲಿ ಹೊಸ ಸಂಪತ್ತು ಸೃಷ್ಟಿ ಹೆಚ್ಚಳ ಆಗುತ್ತಲೇ ಇದೆ ಮತ್ತು ಇದೇ ಕಾರಣಕ್ಕೆ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇಂಥ ಸಂದರ್ಭದಲ್ಲಿ ಒಂದು ಮಹತ್ವದ ಚರ್ಚೆ ಅಲ್ಲಲ್ಲಿ ನಡೆಯುತ್ತಿದೆ. ಅದೇನೆಂದರೆ ಉತ್ತರಾಧಿಕಾರಿ ಯೋಜನೆ. ಇಂಗ್ಲಿಷಿನಲ್ಲಿ ಹೇಳುವುದಾದರೆ ಸಕ್ಸೆಷನ್ ಪ್ಲಾನಿಂಗ್.
ಇತ್ತೀಚೆಗೆ ಕೋಟಕ್ ಪ್ರೈವೇಟ್ ಬ್ಯಾಂಕಿಂಗ್ ಬೆಂಗಳೂರಿನಲ್ಲಿ ‘ಲೀಡಿಂಗ್ ಲೇಡೀಸ್’ ಎಂಬ ಕಾರ್ಯಕ್ರಮ ಏರ್ಪಡಿಸಿತ್ತು. ಆ ಕಾರ್ಯಕ್ರಮದಲ್ಲಿ ಕುಟುಂಬಗಳು ಮತ್ತು ಸಂಸ್ಥಾಪಕರು ತಮ್ಮ ಆರ್ಥಿಕ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಬಲ್ಲ ಸೂಕ್ತ ವ್ಯವಸ್ಥೆಯನ್ನು ಮಾಡುವ ಅಗತ್ಯದ ಕುರಿತು ಸಂವಾದ ನಡೆಯಿತು.
ಭಾರತದಲ್ಲಿ ಆರ್ಥಿಕ ಸಾಕ್ಷರತೆ ಎಷ್ಟೇ ಹೆಚ್ಚಿದರೂ ಇಲ್ಲಿ ವಿಲ್ ಬರೆದಿರುವವರ ಸಂಖ್ಯೆ ಮಾತ್ರ ಬಹಳ ಕಡಿಮೆ ಇದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶೇ.46ರಷ್ಟು ಜನರು ವಿಲ್ ಬರೆದಿದ್ದರೆ, ಭಾರತದಲ್ಲಿ ಕೇವಲ ಶೇ.10ರಷ್ಟು ಜನರು ಮಾತ್ರ ವಿಲ್ ಬರೆದಿದ್ದಾರೆ. ಅದರ ಪರಿಣಾಮವಾಗಿ ಸರ್ಕಾರದ ಬಳಿಯೇ ಸುಮಾರು 50,000 ಕೋಟಿ ರೂಪಾಯಿ ಮೌಲ್ಯದ ಕ್ಲೇಮ್ ಮಾಡಲಾಗದ ಆಸ್ತಿಗಳು ಇವೆ. ಸ್ಟಾರ್ಟ್‌ಅಪ್ ಗಳು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಅಪಾರವಾದ ಸಂಪತ್ತು ಸೃಷ್ಟಿಯಾಗುತ್ತಿದೆ. ಈ ಹಂತದಲ್ಲಿ ಸೂಕ್ತ ಉತ್ತರಾಧಿಕಾರಿ ಯೋಜನೆ ಮಾಡದಿದ್ದರೆ ಕುಟುಂಬಗಳು ಮತ್ತು ಉದ್ಯಮಗಳು ಅಪಾಯ ಎದುರಿಸುವ ಸಾಧ್ಯತೆ ಇದೆ.
ಇತ್ತೀಚೆಗೆ ಆರೋಗ್ಯ ಸಮಸ್ಯೆಗಳು ಅದರಲ್ಲೂ ವಿಶೇಷವಾಗಿ ಯುವ ವೃತ್ತಿಪರರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದು ಈ ಕುರಿತು ತುರ್ತು ಚರ್ಚೆ ನಡೆಸುವ ಅನಿವಾರ್ಯತೆ ಜಾಸ್ತಿ ಮಾಡಿವೆ. ಕೋವಿಡ್ ನಂತರದ ಹಲವಾರು ಪರಿಣಾಮಗಳಿಂದ ಹಿಡಿದು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳ ಹೆಚ್ಚಳದವರೆಗೆ ಅನೇಕ ಮಿಲೇನಿಯಲ್ ಗಳು ಮತ್ತು ಜೆನ್ ಜೀ ಪೀಳಿಗೆಯ ಮಂದಿ ಇದೀಗ “ಡ್ರಾಪ್-ಡೆಡ್ ಸಕ್ಸೆಷನ್ ಪ್ಲಾನ್” ಅನ್ನು ಪರಿಗಣಿಸುತ್ತಿದ್ದಾರೆ. ಅದರರ್ಥ ಕುಟುಂಬದಲ್ಲಿನ ಹಿರಿಯ ಅಥವಾ ಉದ್ಯಮ ನಾಯಕರು ಆಕಸ್ಮಿಕವಾಗಿ ಅಗಲಿದರೆ ಅದಕ್ಕೆ ಪರ್ಯಾಯ ವ್ಯಕ್ತಿ ಅಥವಾ ವ್ಯವಸ್ಥೆ ಮಾಡುವುದು. ಈ ಕುರಿತು ಕೆಎಂಟಿಎಸ್ಎಲ್ ನ ಎಂಡಿ ಕಾಂಚಿ ಗಾಂಧಿ ಅವರು, “ಜೀವನವು ಅನಿಶ್ಚಿತವಾಗಿದೆ. ಹಾಗಾಗಿ ವಿಲ್ ಬರೆಯುವುದು ಮತ್ತು ಸ್ಪಷ್ಟ ಉತ್ತರಾಧಿಕಾರ ಯೋಜನೆಯನ್ನು ಹೊಂದಿರುವುದು ಕೇವಲ ಕಾನೂನು ಔಪಚಾರಿಕತೆ ಮಾತ್ರವೇ ಅಲ್ಲ, ಬದಲಿಗೆ ಅದೊಂದು ಜವಾಬ್ದಾರಿಯಾಗಿದೆ” ಎಂದು ಹೇಳುತ್ತಾರೆ.
ಈ ಸವಾಲನ್ನು ಕುಟುಂಬಗಳು ಎದುರುಗೊಳ್ಳುವ ರೀತಿಯಲ್ಲಿಯೂ ಒಂದು ಅಪರೂಪದ ಬದಲಾವಣೆಯೂ ನಡೆಯುತ್ತಿದೆ. ಸಾಂಪ್ರದಾಯಿಕವಾಗಿ ಸ್ವಲ್ಪ ಹಿಂದೆಯೇ ಉಳಿದಿದ್ದ ಮಹಿಳೆಯರು ಈಗ ಆಸ್ತಿಯ ಮಾಲೀಕತ್ವ, ರಕ್ಷಣೆ ಮತ್ತು ವರ್ಗಾವಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ಧಾರದ ಮೇಲೆ ಪ್ರಭಾವ ಬೀರಲು ತಮ್ಮ ಹಕ್ಕನ್ನು ಬಳಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅವರ ಭಾಗವಹಿಸುವಿಕೆಯಿಂದ ಆರ್ಥಿಕ ಒಳಗೊಳ್ಳುವಿಕೆ ಮತ್ತು ದೀರ್ಘಕಾಲೀನ ಕುಟುಂಬ ಸ್ಥಿರತೆಗೆ ಹೊಸ ಅರ್ಥ ದೊರಕಿದಂತಾಗಿದೆ. ಈ ಕುರಿತು ಗಾಂಧಿ ಅವರು, “ನೀವು ಉದ್ಯಮದ ಸಂಸ್ಥಾಪಕರಾಗಿರಿ, ಗೃಹಿಣಿಯಾಗಿರಲಿ, ಅಥವಾ ವೇತನ ಪಡೆಯುವ ವೃತ್ತಿಪರರೇ ಆಗಿರಿ, ನಿಮ್ಮ ಆರ್ಥಿಕ ಪರಂಪರೆಯ ರಕ್ಷಣೆಗೆ ಮುಂದಾಗುವುದು ಬಹಳ ಮುಖ್ಯ” ಎನ್ನುತ್ತಾರೆ.
ಈ ಚರ್ಚೆಯು ಪ್ರಾಯೋಗಿಕ ಕ್ರಮ ಕೈಗೊಳ್ಳುವ ಅಗತ್ಯವನ್ನೂ ಸಾರಿದೆ. ಕುಟುಂಬಗಳು ಈ ನಿಟ್ಟಿನಲ್ಲಿ ಸರಳ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಲು ಪ್ರೋತ್ಸಾಹಿಸಲಾಗುತ್ತಿದೆ. ಉದಾಹರಣೆಗೆ ಆಸ್ತಿಗಳನ್ನು ಪಟ್ಟಿಮಾಡುವುದು, ಮುಕ್ತ ಸಂವಹನಗಳನ್ನು ನಡೆಸುವುದು ಮತ್ತು ವಿಲ್ ನಂತಹ ಮೂಲಭೂತ ದಾಖಲೆಗಳು ಇರುವಂತೆ ನೋಡಿಕೊಳ್ಳುವುದು ಇತ್ಯಾದಿ ಮಾಡಬೇಕು. ಸಂಕೀರ್ಣ ಆಸ್ತಿಗಳು ಅಥವಾ ಗಡಿಯಾಚೆಗಿನ ಸಂಬಂಧಗಳನ್ನು ಹೊಂದಿರುವ ಉದ್ಯಮಗಳಿಗೆ ಹೆಚ್ಚು ರಚನಾತ್ಮಕ ಯೋಜನೆ ಮಾಡುವ ಅಗತ್ಯ ಬೀಳಬಹುದು. ಆದರೆ ಇವೆಲ್ಲದರ ಅರ್ಥ ಸ್ಪಷ್ಟವಾಗಿದೆ. ಉತ್ತರಾಧಿಕಾರ ಯೋಜನೆ ಅನ್ನುವುದನ್ನು ತುಂಬಾ ಕಡೆಗಣಿಸಬಾರದು. ಯಾಕೆಂದರೆ ಈ ಯೋಜನೆ ಹೊಂದುವುದು ಆರ್ಥಿಕ ಪಕ್ವತೆ ಗಳಿಸುವುದರ ಅಗತ್ಯ ಭಾಗವಾಗಿದೆ. ಅದರಲ್ಲೂ ವಿಶೇಷವಾಗಿ ಸಂಪತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಉತ್ತರಾಧಿಕಾರ ಯೋಜನೆ ಎಂದಿಗಿಂತ ಹೆಚ್ಚು ಮುಖ್ಯವಾಗಿದೆ.
ಬೆಂಗಳೂರಿನ ಆರ್ಥಿಕ ಸಾಮರ್ಥ್ಯ ಬೆಳೆಯುತ್ತಿರುವಂತೆ ಲೀಡಿಂಗ್ ಲೇಡೀಸ್ ನಂತಹ ಸಂವಾದಗಳು ಅರೆ ಕಾಲಿಕ ಗಳಿಕೆಗಿಂತ ದೀರ್ಘಕಾಲೀನ ಸಿದ್ಧತೆ ಕಡೆಗೆ ಗಮನ ಹರಿಸಲು ಪ್ರೇರೇಪಿಸುತ್ತವೆ. ಈ ಮೂಲಕ ಸೂಕ್ತ ಯೋಜನೆ ಇಲ್ಲದೆ ಯಶಸ್ಸಿನ ಕಥೆಗಳು ಉತ್ತಮ ರೀತಿಯಲ್ಲಿ ಮುಗಿಯುವುದಿಲ್ಲ ಎಂಬುದನ್ನು ಸಾರುತ್ತವೆ.