ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಹೊಂದಿರುವ ತುಮಕೂರಿಗೆ ಈಗ ಮತ್ತೊಂದು ಐತಿಹಾಸಿಕ ಯೋಜನೆ ಸೇರ್ಪಡೆಯಾಗಿದೆ. ಸದ್ಯ ತುಮಕೂರಿನಲ್ಲಿ ನಿರ್ಮಾಣಗೊಂಡಿರುವ ಅಕ್ವಾಡಕ್ಟ್ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ವಿಶ್ವದ ಅತಿ ಎತ್ತರದ ಹಾಗೂ ಏಷ್ಯಾದ ಅತಿ ಉದ್ದದ ಮೇಲ್ಗಾಲುವೆ ಇದಾಗಿದೆ. ಮೇಲ್ಗಾಲುವೆಯ ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ತುಮಕೂರು, ಜುಲೈ 8: ಎತ್ತಿನಹೊಳೆ ಯೋಜನೆಗಾಗಿ ಕೈಗೊಳ್ಳಲಾಗಿರುವ ಏಷ್ಯಾದ ಅತಿ ಉದ್ದದ ಮತ್ತು ವಿಶ್ವದ ಅತಿ ಎತ್ತರದ ಅಕ್ವಾಡಕ್ಟ್ ಕಾಲುವೆ (ಮೇಲ್ಗಾಲುವೆ) ನಿರ್ಮಾಣ ಕಾಮಗಾರಿ ಈಗಾಗಲೇ ಮುಕ್ತಾಯಗೊಂಡಿದೆ. ತುಮಕೂರಿನಲ್ಲಿ ನಿರ್ಮಾಣಗೊಂಡ 10.4 ಕಿಲೋಮೀಟರ್ ಉದ್ದದ ಈ ಅಕ್ವಾಡಕ್ಟ್, ಇದೀಗ ದೇಶದ ಗಮನ ಸೆಳೆಯುತ್ತಿದೆ. 2018ರಲ್ಲಿ ಕಾಮಗಾರಿ ಆರಂಭಗೊಂಡು 2023ರಲ್ಲಿ ಪೂರ್ಣಗೊಂಡಿತ್ತು. ಇದೀಗ ಅಂತಿಮ ಹಂತದ ಕೆಲಸಗಳು ಕೂಡ ಮುಗಿದಿದ್ದು, ಈ ಯೋಜನೆಗೆ ರಾಷ್ಟ್ರಮಟ್ಟದ ಮನ್ನಣೆ ಕೂಡ ದೊರೆತಿದೆ.
ತುಮಕೂರು ಜಿಲ್ಲೆಯು ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ಗೆ ಹೆಸರಾಗಿದೆ. ಈಗ, ವಿಶ್ವದ ಅತಿ ಎತ್ತರದ ಅಕ್ವಾಡಕ್ಟ್ ಕಾಲುವೆ ಮೂಲಕ ಮತ್ತೊಂದು ಗರಿಮೆಗೆ ಪಾತ್ರವಾಗಿದೆ.
ಚೇಳೂರಿನಿಂದ ಬೆಳ್ಳಾವಿವರೆಗೆ 10.4 ಕಿಲೋಮೀಟರ್ ವಿಸ್ತಾರಗೊಂಡಿರುವ ಈ ಅಕ್ವಾಡಕ್ಟ್ ಕಾಲುವೆ ಯೋಜನೆಯು ಸದ್ಯ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಈ ಯೋಜನೆಯು ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆಯೂ ಆಗಿದ್ದು, ಎತ್ತಿನಹೊಳೆಯ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಾಗಿಸುವ ಉದ್ದೇಶ ಹೊಂದಿದೆ.
ಅಕ್ವಾಡಕ್ಟ್ ಕಾಲುವೆಯ ಎತ್ತರ ಮತ್ತು ಸಾಮರ್ಥ್ಯ
ಈ ಅಕ್ವಾಡಕ್ಟ್ ಕಾಲುವೆ ಸುಮಾರು 120 ಅಡಿ (40 ಮೀಟರ್) ಎತ್ತರದಲ್ಲಿದೆ ಮತ್ತು 3300 ಕ್ಯೂಸೆಕ್ ನೀರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಸುಮಾರು 1203 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ 2018ರಲ್ಲಿ ಆರಂಭವಾದ ಈ ಯೋಜನೆಯು ಕೋವಿಡ್-19 ಸಾಂಕ್ರಾಮಿಕ ಮತ್ತು ಭೂಸ್ವಾಧೀನದಲ್ಲಿ ಉಂಟಾದ ತೊಂದರೆಗಳಿಂದಾಗಿ ವಿಳಂಬವಾಯಿತು. ಈ ಅಕ್ವಾಡಕ್ಟ್‌ನ ನಿರ್ಮಾಣವು ಕರ್ನಾಟಕ ರಾಜ್ಯದ ಜಲ ಸಂಪನ್ಮೂಲ ನಿರ್ವಹಣೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ. ಇದು ಕೇವಲ ನೀರಿನ ಸಾಗಾಟದ ದರಷ್ಟಿಯಿಂದ ಅಷ್ಟೇ ಅಲ್ಲ, ಆಧುನಿಕ ಎಂಜಿನಿಯರಿಂಗ್ ತಂತ್ರಜ್ಞಾನದ ಪ್ರಗತಿಯನ್ನು ಕೂಡ ಪ್ರದರ್ಶಿಸುತ್ತದೆ.