ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಸಿದ್ದನಕಟ್ಟೆ ಗ್ರಾಮದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಅಶ್ವಿನಿ (20) ಆತ್ಮ8ಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹೊಸ ತಿರುವು ಬೆಳಕಿಗೆ ಬಂದಿದೆ. ಮೊದಲು “ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು” ಎಂದು ಶಂಕಿಸಲಾಗಿದ್ದರೂ, ಈಗ ಯುವತಿಯ ಮೊಬೈಲ್‌ನಲ್ಲಿ ಪತ್ತೆಯಾದ ವಾಟ್ಸಪ್ ಮೆಸೇಜ್ ಹಾಗೂ ಆಡಿಯೋ ಕ್ಲಿಪ್ ಪ್ರಕರಣದ ನಿಜ ಮುಖವನ್ನು ಬಹಿರಂಗಪಡಿಸಿದೆ. ಕಳೆದ ಜೂನ್ 21ರಂದು ಅಶ್ವಿನಿ ತನ್ನ ಮನೆಯಲ್ಲಿ ಸೀರೆಯೊಂದಿಗೆ ಕೊರಳಿಗೆ ನೇಣು ಬಿಗಿದುಕೊಂಡು ಆತ್ಮ8ಹತ್ಯೆ ಮಾಡಿಕೊಂಡಿದ್ದಳು. ಪ್ರಾಥಮಿಕವಾಗಿ ಪ್ರಕರಣವನ್ನು ಯುಡಿಆರ್ ಅಡಿಯಲ್ಲಿ ದಾಖಲಿಸಿಕೊಂಡಿದ್ದ ಚಿಕ್ಕನಾಯಕನಹಳ್ಳಿ ಪೊಲೀಸರು, ನಂತರ ಯುವತಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಪ್ರೀತಿ ಹಾಗೂ ಕಿರುಕುಳದ ಕಥೆ ಬೆಳಕಿಗೆ ಬಂದಿದೆ.
ವಾಟ್ಸಪ್‌ನಲ್ಲಿ ಪ್ರೇಮ ಕಹಾನಿ
ಅಶ್ವಿನಿ ತನ್ನ ಪಕ್ಕದ ಆಶ್ರಿಯಾಲ್ ಗ್ರಾಮದ ಚೇತನ್ ಎಂಬ ಯುವಕನೊಂದಿಗೆ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದಳು. ಆದರೆ, ಇತ್ತೀಚೆಗೆ ಚೇತನ್ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಅಶ್ವಿನಿಗೆ ತಿಳಿದುಬಂದಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಅಶ್ವಿನಿ ತನ್ನ ವಾಟ್ಸಪ್‌ನಲ್ಲಿ ಪ್ರಿಯಕರನಿಗೆ ಮೆಸೇಜ್ ಕಳುಹಿಸಿ, “ನನಗಾದ ಮೋಸ ಯಾರಿಗೂ ಆಗಬಾರದು” ಎಂದು ಬರೆದಿದ್ದಳು. ಅಲ್ಲದೇ, “ನಿನಗೆ ತಕ್ಕ ಪಾಠ ಕಲಿಸುತ್ತೇನೆ” ಎಂದು ಆಡಿಯೋ ಕಳುಹಿಸಿದ್ದಾಳೆ ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಆತ್ಮಹತ್ಯೆಗೆ ಮೊದಲು ಕಳುಹಿಸಿದ ಸೆಲ್ಫಿ
ಅತ್ಯಂತ ಶೋಕಕಾರಿ ಸಂಗತಿಯೆಂದರೆ, ಆತ್ಮಹತ್ಯೆ ಮಾಡಲು ಕೆಲವೇ ಕ್ಷಣಗಳ ಮುನ್ನ ಅಶ್ವಿನಿ ಚೇತನ್‌ಗೆ ವಾಟ್ಸಪ್ ಮೂಲಕ ಸೆಲ್ಫಿ ಫೋಟೋ ಕಳುಹಿಸಿದ್ದಳು. ಆ ಫೋಟೋದಲ್ಲಿ ಅಶ್ವಿನಿ ಸೀರೆಯೊಂದಿಗೆ ಕೊರಳಿಗೆ ನೇಣು ಬಿಗಿಯುತ್ತಿರುವ ದೃಶ್ಯ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಯುಡಿಆರ್ ಅಡಿಯಲ್ಲಿ ಸಾಗುತ್ತಿದ್ದ ತನಿಖೆಯನ್ನು ಈಗ ಪೊಲೀಸರು ಕೊಲೆ ಪ್ರಕರಣವಾಗಿ ಪರಿವರ್ತಿಸಿದ್ದಾರೆ. ಮೃತಳ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಚೇತನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.