ದಾವಣಗೆರೆ: ನಿಮ್ಮಗಳ ಓದು ಕೇವಲ ಅಂಕಗಳಿಕೆಗಾಗಿ ಮಾತ್ರ ಸೀಮಿತವಾಗಬಾರದು. ಜ್ಞಾನಾರ್ಜನೆಗೆ ಆದ್ಯತೆ ನೀಡಿ. ಆಗ ಯಶಸ್ಸು ತಾನಾಗಿಯೇ ನಿಮ್ಮನ್ನು ಅರಸಿ ಬರುತ್ತದೆ ಎಂದ ಅವರು, ಸ್ವಾಮಿ ವಿವೇಕಾನಂದರ ಮಾತನ್ನು ಉಲ್ಲೇಖಿಸಿದ ಅವರು, ಸಾಮರ್ಥ್ಯವು ಗುರಿಯನ್ನು ಕೆಳಗೆ ತರಬಾರದು, ಅದು ಸದಾ ಎತ್ತರದಲ್ಲಿರಬೇಕು. ಆಗ ಮಾತ್ರ ಸಾಧನೆ ಸಾಧ್ಯ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ನಿರೂಪಕ ಎಚ್.ರಾಜಶೇಖರ್ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಆಳವಾಗಿ ಅಧ್ಯಯನ ಮಾಡಿದರೆ, ಆಳವಾದ ಜ್ಞಾನದಿಂದಾಗಿ ಉದ್ಯೋಗ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಯಾವುದೇ ಪದವಿ ಆಯ್ಕೆ ಮಾಡಿಕೊಂಡರೂ ಅದನ್ನು ಆಳವಾಗಿ ಓದಿ, ನಿಮಗೆ ಉದ್ಯೋಗ ಖಂಡಿತಾ ಸಿಗುತ್ತದೆ ಎಂದರು.
ನಮ್ಮ ಫಲಿತಾಂಶದಲ್ಲಿ ಹೆಚ್ಚಿನ ಅಂಕಗಳು ಬಂದಾಗ ಜನರು ನಮ್ಮನ್ನು ನೋಡುವ ದೃಷ್ಠಿಯೇ ಬದಲಾಗುತ್ತದೆ. ಅಕ್ಕಪಕ್ಕದವರೂ ಸಹಾ ನಮ್ಮನ್ನು ಹೊಗಳುತ್ತಾರೆ. ಆದರೆ ನಮ್ಮ ಸಾಮರ್ಥ್ಯವು ನಾವು ಇಟ್ಟುಕೊಂಡಿರುವ ಗುರಿಗಿಂತ ಹೆಚ್ಚಿರಬೇಕು, ಅದಕ್ಕಿಂತ ಕಡಿಮೆಯಾಗಿರಬಾರದು ಎಂದರು.
ನಿಮ್ಮ ಓದಿನಲ್ಲಿ ವಿಶ್ವಾಸ ಇರಬೇಕು, ಆದರೆ ಅತಿಯಾದ ವಿಶ್ವಾಸ ಸರಿಯಲ್ಲ. ನೀವುಗಳು ಕಷ್ಟಪಟ್ಟು ಓದಲಾರದೆ ಕೇವಲ ಅದೃಷ್ಟದಿಂದ ಅಂಕ ಪಡೆಯುತ್ತೇನೆ ಎಂಬ ಹುಚ್ಚುತನ ನಿಮ್ಮಲ್ಲಿ ಬರಬಾರದು. ಗೊಂದಲಗಳಿಗೆ ಆಸ್ಪದ ನೀಡಬೇಡಿ. ಪ್ರತಿಯೊಂದು ಓದಿಗೂ ಅದರದೇ ಆದ ಉದ್ಯೋಗಾವಕಾಶಗಳಿವೆ ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಮೈಸೂರಿನ ಜಿಲ್ಲಾಧ್ಯಕ್ಷ ಡಾ.ನಾಗರಾಜ್ ಬೈರಿ ಮಾತನಾಡಿ, ಕಲಾಕುಂಚ ಸಂಸ್ಥೆ ಕಳೆದ 33 ವರ್ಷಗಳಿಂದ ಸುಮಾರು 35 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸನ್ಮಾನಿಸುತ್ತಾ ಬಂದಿದೆ. ಇದು ಗಿನ್ನೀಸ್ ಪುಸ್ತಕದಲ್ಲಿ ದಾಖಲಾಗಬಹುದಾದ ಮಹತ್ವದ ಸಾಧನೆಯಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಜನರು ಕನ್ನಡ ಮಾತನಾಡುತ್ತಲೇ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಕನ್ನಡಕ್ಕೆ ಅಪಾರ ಶಕ್ತಿ ಇದೆ ಎಂದು ಅವರು ಹೇಳಿದರು.
ಕನ್ನಡ ಮಾಧ್ಯಮದಲ್ಲಿ ಓದಿ ಹೆಚ್ಚು ಅಂಕ ಗಳಿಸುವುದು ಸಂತಸದ ವಿಚಾರ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಸಾಧನೆ ಎಂಬ ಭಾವನೆಯನ್ನು ಲೆಕ್ಕಿಸದೆ, ಕನ್ನಡ ಮಾಧ್ಯಮದಲ್ಲಿನ ಸಾಧನೆಗಳು ನಿಜಕ್ಕೂ ಅಭಿನಂದನಾರ್ಹ ಎಂದು ಹೇಳಿದರು.