ಮಹಿಳೆಯರ ಸೇವಾ ಸಾಧನೆ ಸ್ತುತ್ಯರ್ಹ- ಅನಿತಾ ಸುರೇಂದ್ರ ಕುಮಾರ್

0
43

ಮೂಡುಬಿದಿರೆ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಮತ್ತು ಸಾಧನೆಯ ಮೂಲಕ ಸ್ತುತ್ಯರ್ಹ ಕಾರ್ಯ ಮಾಡುತ್ತಿದ್ದಾರೆ. ಇಂತಹ ಸೇವೆ, ಸಾಧನೆಗಳು ನಿರಂತರ ಮುಂದುವರಿಯಲಿ ಎಂದು ಭಾರತೀಯ ಜೈನ್ ಮಿಲನ್ ನ ಉಪಾಧ್ಯಕ್ಷೆಯೂ ಆಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ನುಡಿದರು. ಜು. 21ರಂದು ಸಂಜೆ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ನಡೆದ ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ನೂತನ ಅಧ್ಯಕ್ಷೆ ನ್ಯಾಯವಾದಿ ಶ್ವೇತಾ ಜೈನ್, ಕಾರ್ಯದರ್ಶಿ ಅನಿತಾ ಪಿ. ಶೆಟ್ಟಿ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಮೂಡುಬಿದಿರೆಯ ಇನ್ನರ್ ವೀಲ್ ಕ್ಲಬ್ ಕಳೆದ 35 ವರ್ಷಗಳಿಂದ ಗೈದಿರುವ ಸೇವೆ ಸಾಧನೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ವಿದ್ಯಾಗಿರಿ, ನಿಶ್ಮಿತಾ ಟವರ್ ಬಳಿಯ ಬಸ್ ತಂಗುದಾಣ, ಇನ್ನರ್ ವೀಲ್ ಕ್ಲಬ್ ವೃತ್ತಗಳು ಮೂಡುಬಿದಿರೆಯಲ್ಲಿ ಕ್ಲಬ್ ಹಮ್ಮಿಕೊಂಡಿರುವ ಸೇವೆಯ ಪ್ರತೀಕವಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕ್ಲಬ್‌ನ ಎಲ್ಲಾ ಹಿರಿಯ ಸದಸ್ಯೆಯರು ಅಭಿನಂದನೀಯರು ಎಂದು ನುಡಿದರು.

ಇನ್ನರ್ ವೀಲ್ ಕ್ಲಬ್ ಜಿಲ್ಲಾ ಉಪಾಧ್ಯಕ್ಷೆ ರಜನಿ ಭಟ್ ಅವರು ಮಾತನಾಡಿ ಒಂದು ಹೆಜ್ಜೆ ಮುಂದೆ ಹೋಗಿ ಮಾದರಿ ನಾಯಕತ್ವ ಈ ವರ್ಷ ಇನ್ನರ್ ವೀಲ್ ಕ್ಲಬ್‌ನ ಧ್ಯೇಯವಾಕ್ಯವಾಗಿದ್ದು ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ನ ನೂತನ ಅಧ್ಯಕ್ಷೆ ಶ್ವೇತಾ ಜೈನ್ ಒಂದು ಹೆಜ್ಜೆ ಮುಂದೆ ಹೋಗಿ 33 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಶ್ಲಾಘಿಸಿ ಶುಭ ಕೋರಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಹಗಡೆಯವರು ಮಾತನಾಡಿ ಸ್ನೇಹ ಮತ್ತು ಸೇವೆ ಇನ್ನರ್ ವೀಲ್ ಕ್ಲಬ್‌ನ ಧ್ಯೇಯವಾಗಿದ್ದು ಈ ಆಶಯದೊಂದಿಗೆ ನಡೆಯುವ ಕ್ಲಬ್‌ನ ಎಲ್ಲಾ ಚಟುವಟಿಕೆಗಳಿಗೆ ಪೂರ್ಣ ಬಂಬಲ ನೀಡುವ ಭರವಸೆಯಿತ್ತರು. ನೂತನ ಅಧ್ಯಕ್ಷೆ ಶ್ವೇತಾ ಜೈನ್ ಅವರು ಮಾತನಾಡಿ ಕ್ಲಬ್‌ನ ಹಿರಿಯ ಸದಸ್ಯೆಯರಾದ ಶಾಲಿನಿ ನಾಯಕ್, ಜಯಶ್ರೀ ಅಮರನಾಥ ಶೆಟ್ಟಿ, ಪ್ರಕಾಶಿನಿ ಹೆಗ್ಡೆ ಮುಂತಾದವರ ಪಾರದರ್ಶಕ ನಾಯಕತ್ವ ತಮಗೆ ಮಾದರಿಯಾಗಿದ್ದು, ತಮ್ಮ ಕಕ್ಷಿದಾರರಿಗೆ ಯಾವುದೇ ತೊಂದರೆಯಾಗದಂತೆ ವಕೀಲ ವೃತ್ತಿಯನ್ನು ಮುಂದುವರಿಸಿ, ಕ್ಲಬ್‌ ಮುಖಾಂತರ ಹಮ್ಮಿಕೊಳ್ಳುವ ಎಲ್ಲಾ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಭರವಸೆಯಿತ್ತರು.

ಸೇವಾ ಕಾರ್ಯಕ್ರಮದ ಅಂಗವಾಗಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಕು. ಕುಸುಮಾ ಅವರಿಗೆ ರೂ. 15 ಸಾವಿರ ಸಹಾಯಧನ, ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರೂ. 10 ಸಾವಿರದ ಪುಸ್ತಕಗಳು, ಮೂಡುಬಿದಿರೆ ಪ್ರೆಸ್ ಕ್ಲಬ್ ನೂತನ ಕಟ್ಟಡ ನಿರ್ಮಾಣಕ್ಕೆ ರೂ. 10 ಸಾವಿರ ಕೊಡುಗೆ ಹಾಗೂ ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ ನ ಹಸಿ ಮತ್ತು ಒಣ ಕಸ ಸಂಗ್ರಹಣಾ ವ್ಯವಸ್ಥೆಗೆ ರೂ. 5ಸಾವಿರ ಮೌಲ್ಯದ ಸಾಮಗ್ರಿ ವಿತರಿಸಲಾಯಿತು. ಇನ್ನರ್ ವೀಲ್ ಕ್ಲಬ್ ಜಿಲ್ಲಾ ಸಂಪಾದಕಿ ದೀಪಾ ಭಂಡಾರಿ, ಐ.ಎಸ್.ಒ. ಸಹನಾ ಭಟ್ ಉಪಸ್ಥಿತರಿದ್ದರು. ಬಿಂದಿಯಾ ಶೆಟ್ಟಿ ಸ್ವಾಗ ತಿಸಿದರು. ಅನಿತಾ ಪ. ಶೆಟ್ಟಿ ಸೇವಾ ಕಾರ್ಯಗಳ ವಿವರ ನೀಡಿದರು. ಅಪೇಕ್ಷಾ ಪೂರ್ಣಚಂದ್ರ ಜೈನ್ ಪ್ರಾರ್ಥಿಸಿದರು. ತರೀನಾ ಪಿಂಟೋ ನಿರೂಪಿಸಿದ ಕಾರ್ಯಕ್ರಮದಲ್ಲಿ ನಿಶ್ಮಿತಾ ನಾಗರಾಜ್ ವಂದಿಸಿದರು.

LEAVE A REPLY

Please enter your comment!
Please enter your name here