ವಿಶ್ವ ಕ್ಯಾನ್ಸರ್ ದಿನ 2026 : ಕ್ಯಾನ್ಸರ್ ಜಾಗೃತಿಗಾಗಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ವತಿಯಿಂದ ಬೈಕ್ ರಾಲಿ (ಜಾಥಾ)

0
25

ಮಣಿಪಾಲ, 04 ಫೆಬ್ರವರಿ 2026 :ಪ್ರತಿ ವರ್ಷ ಫೆಬ್ರವರಿ 4ರಂದು ಆಚರಿಸಲ್ಪಡುವ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು, ಮಣಿಪಾಲ ಆಟೋ ಕ್ಲಬ್, ಉಡುಪಿ ಜಾವಾ–ಯೆಜ್ಡಿ ಮೋಟಾರ್‌ಸೈಕಲ್ ಕ್ಲಬ್, ರಾಯಲ್ ಎನ್‌ಫೀಲ್ಡ್ ರೈಡರ್ಸ್ ಉಡುಪಿ ಹಾಗೂ ಆಭರಣ ಮೋಟಾರ್ಸ್, ಉಡುಪಿ ಇವರ ಸಹಯೋಗದೊಂದಿಗೆ “ನಾವು ಒಟ್ಟಾಗಿ ಕ್ಯಾನ್ಸರ್ ವಿರುದ್ಧ ಜೀವನಕ್ಕಾಗಿ ಸವಾರಿ ಮಾಡುತ್ತೇವೆ” ಎಂಬ ದ್ಯೇಯದೊಂದಿಗೆ ಬೈಕ್ ರಾಲಿ ಯನ್ನು ಆಯೋಜಿಸಿತು. ಈ ಕಾರ್ಯಕ್ರಮದ ಉದ್ದೇಶ ಕ್ಯಾನ್ಸರ್ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಸಾರ್ವಜನಿಕರ ಒಗ್ಗಟ್ಟಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು.

ಕ್ಯಾನ್ಸರ್ ಎನ್ನುವುದು ದೇಹದ ಕೆಲವು ಕೋಶಗಳು ನಿಯಂತ್ರಣವಿಲ್ಲದೆ ಬೆಳೆಯುತ್ತಾ ದೇಹದ ಇತರ ಭಾಗಗಳಿಗೆ ಹರಡುವ ಸ್ಥಿತಿಯಾಗಿದೆ. ಜಾಗತಿಕವಾಗಿ ಕ್ಯಾನ್ಸರ್ ಮರಣದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ತಂಬಾಕು ಸೇವನೆ, ದೀರ್ಘಕಾಲ ಮದ್ಯಪಾನ, ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ ಹಾಗೂ ವಾಯುಮಾಲಿನ್ಯಕ್ಕೆ ತುತ್ತಾಗುವುದು ಕ್ಯಾನ್ಸರ್‌ಗೆ ಪ್ರಮುಖ ಅಪಾಯಕಾರಕ ಅಂಶಗಳಾಗಿವೆ. ಜಾಗೃತಿ ಕೊರತೆ, ತಡವಾದ ರೋಗನಿರ್ಣಯ ಹಾಗೂ ಕೈಗೆಟುಕುವ ಚಿಕಿತ್ಸೆಗೆ ಕಡಿಮೆ ಪ್ರವೇಶ ಇರುವುದರಿಂದ ಅನೇಕ ಕಡೆಗಳಲ್ಲಿ ಕ್ಯಾನ್ಸರ್‌ನ ಪರಿಣಾಮ ಗಂಭೀರವಾಗುತ್ತಿದೆ. ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿವರ್ಷ ಫೆಬ್ರವರಿ 4ರಂದು ಆಚರಿಸುವ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಸಮಯೋಚಿತ ಚಿಕಿತ್ಸೆಯ ಮಹತ್ವವನ್ನು ಒತ್ತಿ ಹೇಳಲಾಗುತ್ತದೆ.

ಈ ಬೈಕ್ ರಾಲಿಯಲ್ಲಿ 100ಕ್ಕೂ ಹೆಚ್ಚು ಬೈಕ್ ಸವಾರರು ಉತ್ಸಾಹದಿಂದ ಭಾಗವಹಿಸಿದ್ದು, ಕ್ಯಾನ್ಸರ್ ರಹಿತ ಭವಿಷ್ಯದತ್ತ ಏಕತೆ, ಶಕ್ತಿ ಮತ್ತು ಬದ್ಧತೆಯ ಸಂಕೇತವಾಯಿತು. ಜಾಥವು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಿಂದ ಹೊರಟು ಉಡುಪಿ ಮುಖ್ಯ ರಸ್ತೆಯ ಮೂಲಕ ಕಿನ್ನಿಮುಲ್ಕಿ ಸ್ವಾಗತ ಗೋಪುರದವರೆಗೆ ಹಾಗೂ ಮರುಕಳಿಸಿ ಕಸ್ತೂರ್ಬಾ ಆಸ್ಪತ್ರೆಗೆ ಸಾಗಿದ್ದು, ಕ್ಯಾನ್ಸರ್ ಜಾಗೃತಿ ಮತ್ತು ಸಮಯೋಚಿತ ವೈದ್ಯಕೀಯ ಚಿಕಿತ್ಸೆಯ ಮೂಲಕ ಜೀವ ಉಳಿಸಬಹುದೆಂಬ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿತು.

ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಐಪಿಎಸ್ ಮುಖ್ಯ ಅತಿಥಿಯಾಗಿ ಹಾಗೂ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ (MHEPL) ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಪ್ ಜೋಸ್ ಗೌರವ ಅತಿಥಿಯಾಗಿ ಆಗಮಿಸಿ ಬೈಕ್ ರಾಲಿಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಡಾ. ಸುಧಾಕರ್ ಕಂಟಿಪುಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಮಣಿಪಾಲ ಕ್ಲಸ್ಟರ್), ಡಾ. ಅವಿನಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು, ಹಾಗೂ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ (MCCCC)ದ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಸುಧಾಕರ್ ಕಂಟಿಪುಡಿ, ಕ್ಯಾನ್ಸರ್ ಪ್ರಕರಣಗಳ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿ, ಜಾಗೃತಿ, ನಿಯಮಿತ ತಪಾಸಣೆ ಹಾಗೂ ಜೀವನಶೈಲಿ ಬದಲಾವಣೆಯ ಅಗತ್ಯವನ್ನು ಒತ್ತಿ ಹೇಳಿದರು. ಇಂತಹ ಜಾಥಾಗಳ ಮೂಲಕ ಆಸ್ಪತ್ರೆಯ ಮಿತಿಯನ್ನು ಮೀರಿ ಸಮಾಜದೊಳಗೆ ಆರೋಗ್ಯ ಸಂದೇಶವನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿ ಹರಿರಾಮ್ ಶಂಕರ್, ಐಪಿಎಸ್, ಈ ಜಾಗೃತಿ ಕಾರ್ಯಕ್ರಮವನ್ನು ಶ್ಲಾಘಿಸಿ, ಬೈಕ್ ಸವಾರರು ಹಾಗೂ ಆರೋಗ್ಯ ವೃತ್ತಿಪರರ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರಶಂಸಿಸಿದರು. ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಶಿಸ್ತು, ಸುರಕ್ಷಿತ ವಾಹನ ಚಾಲನೆ ಹಾಗೂ ಸಮುದಾಯದ ಸಹಕಾರ ಅತ್ಯಂತ ಮಹತ್ವದ್ದೆಂದು ಅವರು ಹೇಳಿದರು. ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿರುವುದಕ್ಕಾಗಿ ಕಸ್ತೂರ್ಬಾ ಆಸ್ಪತ್ರೆಯನ್ನು ಅವರು ಅಭಿನಂದಿಸಿದರು.

ಗೌರವ ಅತಿಥಿ ದಿಲೀಪ್ ಜೋಸ್ , ಕ್ಯಾನ್ಸರ್ ಚಿಕಿತ್ಸೆ, ತಡೆಗಟ್ಟುವಿಕೆ ಹಾಗೂ ಸಮುದಾಯದೊಂದಿಗೆ ಸಂಪರ್ಕ ಕಾರ್ಯಕ್ರಮಗಳಿಗೆ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಶಿಕ್ಷಣ ಮತ್ತು ಆರಂಭಿಕ ಪತ್ತೆಯ ಮೂಲಕ ಕ್ಯಾನ್ಸರ್‌ನ ಭಾರವನ್ನು ಕಡಿಮೆ ಮಾಡುವಲ್ಲಿ ಆರೋಗ್ಯ ಸಂಸ್ಥೆಗಳು, ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಅನಂತ್ ಪೈ ಅವರು ವಿಶ್ವ ಕ್ಯಾನ್ಸರ್ ದಿನದ ಮಹತ್ವದ ಕುರಿತು ಮಾಹಿತಿ ನೀಡಿ, ಜಾಗೃತಿ, ಆರಂಭಿಕ ಪತ್ತೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಇತ್ತೀಚಿನ ಪ್ರಗತಿಗಳ ಬಗ್ಗೆ ವಿವರಿಸಿದರು.

.

LEAVE A REPLY

Please enter your comment!
Please enter your name here