ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಅವರಿಗೆ ವಿಶ್ವ ಬಂಟ ಪ್ರತಿಷ್ಠಾನ ಪ್ರಶಸ್ತಿ

0
39

ಆಗಸ್ಟ್ 23ರಂದು ಪ್ರಶಸ್ತಿ ಪ್ರದಾನ

ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನವು ಡಾ.ಡಿ.ಕೆ. ಚೌಟ ದತ್ತಿನಿಧಿಯಿಂದ ನೀಡುವ ಯಕ್ಷಗಾನ ಪ್ರಶಸ್ತಿಗೆ 2025ನೇ ಸಾಲಿನಲ್ಲಿ ತೆಂಕು ತಿಟ್ಟು ಯಕ್ಷಗಾನದ ಹೆಸರಾಂತ ಸ್ತ್ರೀವೇಷಧಾರಿ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಆಯ್ಕೆಯಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಬಡಗು ತಿಟ್ಟಿನ ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರನ್ನೊಳಗೊಂಡ ಸಲಹಾ ಸಮಿತಿಯು ಈ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಪ್ರಮಾಣ ಫಲಕವನ್ನೊಳಗೊಂಡಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಸಿಎ ವೈ.ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು

ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಗೋಣಿಬೀಡಿನಲ್ಲಿ ದಿ.ಐತಪ್ಪ ಶೆಟ್ಟಿ ಮತ್ತು ಸುಂದರಿ ಶೆಟ್ಟಿ ದಂಪತಿಗೆ 1960 ಜೂನ್ 1ರಂದು ಜನಿಸಿದ ಸಂಜಯ ಕುಮಾರ್ ಶೆಟ್ಟಿ ಅವರು ತನ್ನ ಪ್ರೌಢಶಾಲಾ ವ್ಯಾಸಂಗ ಪೂರೈಸಿ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ದಿ.ಪಡ್ರೆ ಚಂದು ಅವರಿಂದ ಯಕ್ಷಗಾನ ನೃತ್ಯಾಭ್ಯಾಸ ಮಾಡಿದರು.16ನೇ ವಯಸ್ಸಿನಲ್ಲಿ ಪುತ್ತೂರು ಶೀನಪ್ಪ ಭಂಡಾರಿಯವರ ಆದಿ ಸುಬ್ರಹ್ಮಣ್ಯ ಮೇಳದಲ್ಲಿ ತಿರುಗಾಟ ಆರಂಭಿಸಿ, ಮುಂದೆ ಪುತ್ತೂರು, ಸುರತ್ಕಲ್, ಕರ್ನಾಟಕ, ಗಣೇಶಪುರ, ಮಂಗಳಾದೇವಿ, ಕುಂಟಾರು, ಎಡನೀರು, ಹೊಸನಗರ, ಬಪ್ಪನಾಡು, ಕೊಲ್ಲಂಗಾನ, ಮಲ್ಲ, ಬಾಚಕೆರೆ ಮುಂತಾದ ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಕಲಾ ಸೇವೆ ಮಾಡಿದ್ದಾರೆ.
ಶ್ರೀದೇವಿ, ದ್ರೌಪದಿ, ದಮಯಂತಿ, ಸುಭದ್ರೆ, ಸೀತೆ, ದಾಕ್ಷಾಯಿಣಿ, ಅಂಬೆ, ಚಿತ್ರಾಂಗದೆ, ಕಯಾದು, ಮೋಹಿನಿ, ಮೇನಕೆ, ತ್ರಿಲೋಕ ಸುಂದರಿ, ಸ್ವೈರಿಣಿ ಮೊದಲಾದವು ಅವರಿಗೆ ಹೆಸರು ತಂದ ಸ್ತ್ರೀಪಾತ್ರಳು. ತುಳು ಪ್ರಸಂಗಗಳಲ್ಲಿ ಕಿನ್ನಿದಾರು, ಸಿರಿ, ಸೋಮಲಾದೇವಿ, ಕಚ್ಚೂರ ಮಾಲ್ದಿ, ಗೆಜ್ಜೆ ಪೂಜೆಯ ತುಳಸಿ, ಎಲ್ಲೂರ ಮಲ್ಲಿ, ಕಾಡಮಲ್ಲಿಗೆಯ ತುಂಗೆ, ನಾಡ ಕೇದಗೆ, ನೀಲಾಂಬರಿ, ಸಿರಿ ಬಾಲೆ, ಪಲ್ಲವಿ, ಶ್ರೀಮತಿ … ಇತ್ಯಾದಿ ಪಾತ್ರಗಳಲ್ಲಿ ಸಂಜಯ ಕುಮಾರ್ ಶೆಟ್ಟಿ ಅವರು ತಮ್ಮ ಸ್ತ್ರೀ ವೇಷದ ಛಾಪನ್ನು ಮೂಡಿಸಿದ್ದಾರೆ. ಶ್ರೀರಾಮ, ಶ್ರೀಕೃಷ್ಣ, ಲಕ್ಷ್ಮಣ, ಅಯ್ಯಪ್ಪ, ಪರಶುರಾಮ, ಮನ್ಮಥ, ಲವ – ಕುಶ ಮುಂತಾದ ಪುಂಡುವೇಷಗಳಲ್ಲೂ ಅವರು ಪ್ರಸಿದ್ಧರು.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ, ಉಡುಪಿ ಯಕ್ಷಗಾನ ಕಲಾರಂಗ, ಸ್ವಸ್ತಿಸಿರಿ, ರೋಟರಿ, ಅರುವ ಪ್ರತಿಷ್ಠಾನ, ಕದ್ರಿ ಹವ್ಯಾಸಿ ಬಳಗ, ಒಡಿಯೂರು ಗುರುದೇವಾನಂದ ಪ್ರಶಸ್ತಿಗಳಲ್ಲದೆ, ಬೋಳಾರ, ಪುಳಿಂಚ, ಶೇಣಿ ಜನ್ಮ ಶತಮಾನೋತ್ಸವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಪಾತಾಳ – ಯಕ್ಷ ಮಂಗಳ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಯಕ್ಷರಂಗದ ಚಿರಕನ್ನಿಕೆ, ಯಕ್ಷ ಮಿನುಗುತಾರೆ, ಯಕ್ಷ ಮಣಿಮೇಖಲಾ, ಯಕ್ಷ ಮಯೂರಿ, ಯಕ್ಷ ನಂದಿನಿ, ಯಕ್ಷ ನಾಟ್ಯ ಲಲಿತೆ ಮೊದಲಾದ ಬಿರುದುಗಳು ಅವರಿಗೆ ಸಂದಿವೆ. ಪ್ರಸ್ತುತ ವೃತ್ತಿ ಬದುಕಿನ ಅರ್ಧ ಶತಮಾನವನ್ನು ಪೂರೈಸಿರುವ ಅವರು ಈ ವರ್ಷ ತನ್ನ ಯಕ್ಷ ಯಾನದ ಸುವರ್ಣ ಸಂಭ್ರಮದಲ್ಲಿದ್ದಾರೆ.
ಪತ್ನಿ ಪ್ರಫುಲ್ಲ ಸಂಜಯ್, ಪುತ್ರಿ ದೀಕ್ಷಾ, ಪುತ್ರರಾದ ದರ್ಶನ್ ಮತ್ತು ದಕ್ಷಿಣ್ ಅವರೊಂದಿಗೆ ಸುಖೀ ಜೀವನ ನಡೆಸುತ್ತಿರುವ ಯಕ್ಷ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಅವರು ಮಂಗಳೂರಿನ ಬೆಂದೂರು ಬಳಿ ‘ಯಕ್ಷ ಭ್ರಮರ’ ನಿವಾಸದಲ್ಲಿ ನೆಲೆಸಿದ್ದಾರೆ.

ಪ್ರಶಸ್ತಿ ಪ್ರದಾನ:
ಆ.23ರಂದು ನಗರದ ಕರಂಗಲಪಾಡಿ ಎ.ಜೆ.ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುವ ವಿಶ್ವ ಬಂಟ ಪ್ರತಿಷ್ಠಾನ ಟ್ರಸ್ಟ್‌ನ 29ನೇ ವಾರ್ಷಿಕ ಮಹಾಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

LEAVE A REPLY

Please enter your comment!
Please enter your name here