ಕಟೀಲು: ದುಬೈನಲ್ಲಿ ಮಕ್ಕಳಿಗೆ ನಮ್ಮ ಯಕ್ಷಗಾನ ಕಲೆಯನ್ನು ಕಲಿಸುವ ಮೂಲಕ ಯಕ್ಷಗಾನಾರಾಧನೆ ಆಗುತ್ತಿದೆ. ಕಲಾವಿದರನ್ನು ಜೊತೆಗೆ ಪ್ರೇಕ್ಷಕರನ್ನು ಸೃಷ್ಟಿಸುವ ಕೆಲಸ ಆಗುತ್ತಿದೆ ಎಂಬುದು ಹೆಮ್ಮೆ ಅಭಿಮಾನದ ಸಂಗತಿ ಆಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಸನ್ನಿಧಿಯ ಸರಸ್ವತಿ ಸದನದಲ್ಲಿ ಯಕ್ಷಗಾನ ಕೇಂದ್ರ ಯುಎಇ ಇವರ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀ ದೇವಿ ಸನ್ನಿಧಿಯಲ್ಲಿ ಯಕ್ಷ ಗಾನಾರ್ಚನೆ, ಹಾಗೂ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಗೆಜ್ಜೆ ಸೇವೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಾಗಾಗಿ ಮಕ್ಕಳಿಗೆ ಸಂಬಂಧಗಳ ಮಹತ್ವ ಸಾರುವ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಅದಕ್ಕೆ ಯಕ್ಷಗಾನ ಪೂರಕ ಎಂದು ಶಿವರಾಮ ಶೆಟ್ಟಿ ಹೇಳಿದರು.
ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಮುರಳೀಧರ ಭಟ್ ಕಟೀಲು, ಹಿರಿಯ ಕಲಾವಿದ ಮುಂಡ್ಕೂರು ಕೃಷ್ಣ ಶೆಟ್ಟಿ ಇವರನ್ನು ರೂಪಾಯಿ 25 ಸಾವಿರ ನಗದು ಸಹಿತ ಯಕ್ಷ ಶ್ರೀ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚಿಗೆ ನಿಧನರಾದ ಆನಂದ ಕಟೀಲು ಅವರ ಪತ್ನಿಗೆ ಮರಣೋತ್ತರ ಗೌರವ ಧನ ನೀಡಲಾಯಿತು.
ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿ ಕಟೀಲು ದೇವಿ ಯಕ್ಷಗಾನ ಪ್ರಿಯೆ. ಆಕೆಯ ಸನ್ನಿಧಿಯಲ್ಲಿ ದುಬೈನ ಮಕ್ಕಳು ಗೆಜ್ಜೆ ಸೇವೆ ನೀಡುವುದು ಪುಣ್ಯ ಎಂದು ಹೇಳಿದರು.
ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ ಇವರು ದುಬೈ ಯಕ್ಷಗಾನ ಅಭ್ಯಾಸ ಕೇಂದ್ರ ಸಂಚಾಲಕ ದಿನೇಶ್ ಟಿ ಶೆಟ್ಟಿ ಕೊಟ್ಟಿಂಜ ಹಾಗೂ ಗುರು ಶೇಖರ ಶೆಟ್ಟಿಗಾರ್ ಅವರನ್ನು ಗೌರವಿಸಿದರು. ಭುವನಾಭಿರಾಮ ಉಡುಪ, ಉದ್ಯಮಿ ವಾಸು ಭಟ್ ಮತ್ತಿತರರು ಇದ್ದರು.
ಉದ್ಘಾಟನೆ
ಯಕ್ಷಗಾನ ಕಾರ್ಯಕ್ರಮವನ್ನು ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ ಉದ್ಘಾಟಿಸಿದರು.
ಸನಾತನ ಹಿಂದೂ ಸಂಸ್ಕೃತಿಯನ್ನು ಉಳಿಸುವಲ್ಲಿ ಯಕ್ಷಗಾನ ಮಹತ್ವದ್ದು. ಅದನ್ನು ವಿದೇಶದಲ್ಲಿ ಕಲಿಸುವ ಮೂಲಕ ಅಭಿನಂದನೀಯ ಕಾರ್ಯ ಮಾಡಿದ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಘಟಕ ಉತ್ತಮ ಕೆಲಸ ಮಾಡಿದೆ ಎಂದು ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಪೊಳಲಿಯ ಜನನಿದಾಸ, ಪತ್ರಕರ್ತ ಹರೀಶ ಕುಲ್ಕುಂದ, ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ಯುಎಇ ಯಕ್ಷಗಾನ ಕೇಂದ್ರದ ದಿನೇಶ್ ಕೊಟ್ಟಿಂಜ, ಯಕ್ಷಗಾನ ಗುರು ಶೇಖರ ಶೆಟ್ಟಿಗಾರ್ ಮತ್ತಿತರರಿದ್ದರು. ಚೇತನ್ ಶೆಟ್ಟಿ ನಿರೂಪಿಸಿದರು.
ಬೆಳಗ್ಗೆ ಶ್ರೀದೇವಿ ಸನ್ನಿಧಿಯಲ್ಲಿ ಕೇಂದ್ರದ ಭಾಗವತಿಕೆ ಗುರುಗಳಾದ ಭವ್ಯಶ್ರೀ ಕುಲ್ಕುಂದ ಅವರ ಮಾರ್ಗದರ್ಶನ ಹಾಗೂ ನಿರೂಪಣೆಯಲ್ಲಿ ಮಕ್ಕಳಿಂದ ಗಾನಾರ್ಚನೆ, ಕೇಂದ್ರದ 60ಕ್ಕೂ ಹೆಚ್ಚು , ಯಕ್ಷಗಾನ ಪೂರ್ವರಂಗ, ಬಯಲಾಟ ಮಣಿಕಂಠ ಮಹಿಮೆ ಪ್ರದರ್ಶಗೊಂಡಿತು. ದುಬೈನಲ್ಲಿ ನೆಲೆಸಿರುವ ತಮ್ಮ ಮಕ್ಕಳು ಮೊಮ್ಮಕ್ಕಳು, ಊರಿನಲ್ಲಿ ಅದರಲ್ಲೂ ಕಟೀಲು ದೇವಿಯ ಸನ್ನಿಧಿಯಲ್ಲಿ ಪ್ರದರ್ಶನ ನೀಡುವುದನ್ನು ನೋಡಲು ಅವರ ಸಂಬಂಧಿಕರು ಕಲಾಸಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.

