ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಾರೋಪ – ಯಕ್ಷಾಂಗಣ ಪ್ರಶಸ್ತಿ ಪ್ರದಾನ

0
20

ಬಹು ಮಾಧ್ಯಮಗಳ ನಡುವೆ ಯಕ್ಷಗಾನ ಅಸ್ತಿತ್ವ ಉಳಿಸಿಕೊಂಡಿದೆ: ರವಿರಾಜ ಹೆಗ್ಡೆ

ಮಂಗಳೂರು: ‘ಯಕ್ಷಗಾನ ಕರಾವಳಿಯ ಶ್ರೀಮಂತ ಕಲೆ. ಹಿಂದಿನಿಂದಲೂ ಕಲಾವಿದರು, ಸಂಘಟಕರು ಹಾಗೂ ಕಲಾ ಸಂಸ್ಥೆಗಳ ಪರಿಶ್ರಮದಿಂದ ಅದು ಬೆಳೆದು ಬಂದಿದೆ. ಇಂದಿನ ಬಹು ಮಾಧ್ಯಮಗಳ ನಡುವೆ ತಾಂತ್ರಿಕ ಜಗತ್ತಿನ ಸವಾಲುಗಳನ್ನು ಎದುರಿಸಿಯೂ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಈ ದಿಸೆಯಲ್ಲಿ ಯಕ್ಷಾಂಗಣ ಸಂಸ್ಥೆ ಕಳೆದ ಹನ್ನೆರಡು ವರ್ಷಗಳಿಂದ ಯಕ್ಷಗಾನ ತಾಳಮದ್ದಳೆ ಪ್ರಕಾರಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಾ ಬಂದಿದೆ’ ಎಂದು ದ.ಕ.ಜಿಲ್ಲಾ ಹಾಲುತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ.ಡಾ|ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರ ಸಹಯೋಗದೊಂದಿಗೆ ನ. 23 ರಿಂದ 29 ರವರೆಗೆ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಳೆ – 2025’ ಹದಿಮೂರನೇ ವರ್ಷದ ನುಡಿ ಹಬ್ಬ, ತ್ರಯೋದಶ ಸರಣಿಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೋಳಾರ ಸುಬ್ಬಯ್ಯಶೆಟ್ಟರಿಗೆ ಪ್ರಶಸ್ತಿ:
ಸಮಾರಂಭದಲ್ಲಿ 85 ವರ್ಷ ಹರೆಯದ ಹಿರಿಯ ಯಕ್ಷಗಾನ ಕಲಾವಿದ ಬೋಳಾರ ಸುಬ್ಬಯ್ಯಶೆಟ್ಟರಿಗೆ 2024 – 25 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಯನ್ನು ಪ್ರದಾನಿಸಲಾಯ್ತು. ಶಾಲು, ಸ್ಮರಣಿಕೆ, ಪ್ರಶಸ್ತಿ ಫಲಕ ಮತ್ತು ಗೌರವ ನಿಧಿಯೊಂದಿಗೆ ಗಣ್ಯರು ಸುಬ್ಬಯ್ಯಶೆಟ್ಟಿ ಮತ್ತು ಲೀಲಾವತಿ ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರು. ಸಮಿತಿಯ ರವೀಂದ್ರ ರೈ ಕೆ. ಪ್ರಶಸ್ತಿ ಪತ್ರ ವಾಚಿಸಿದರು. ಪುಳಿಂಚ ಪ್ರತಿಷ್ಠಾನದ ಅಧ್ಯಕ್ಷ ನ್ಯಾಯವಾದಿ ಶ್ರೀಧರ್ ಶೆಟ್ಟಿ ಪುಳಿಂಚ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ಮಂಗಳೂರು ವಿ.ವಿ‌.ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಧನಂಜಯ ಕುಂಬ್ಳೆ ಮುಖ್ಯ ಅತಿಥಿಗಳಾಗಿದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತ ಭಾಷಣದೊಂದಿಗೆ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸಂಚಾಲಕ ರವೀಂದ್ರ ರೈ ಕಲ್ಲಿಮಾರು ವಂದಿಸಿದರು. ಸಮಿತಿಯ ಪ್ರಮುಖರಾದ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಕರುಣಾಕರ ಶೆಟ್ಟಿ ಪಣಿಯೂರು, ಲಕ್ಷ್ಮೀ ನಾರಾಯಣ ರೈ ಹರೇಕಳ, ಸುಧಾಕರ ರಾವ್ ಪೇಜಾವರ, ಉಮೇಶ ಆಚಾರ್ಯ, ಸಿದ್ದಾರ್ಥ ಅಜ್ರಿ, ವಾಸಪ್ಪ ಶೆಟ್ಟಿ ಬೆಳ್ಳಾರೆ, ನಿವೇದಿತಾ ಎನ್.ಶೆಟ್ಟಿ ಮತ್ತು ಸುಮಾ ಪ್ರಸಾದ್ ಉಪಸ್ಥಿತರಿದ್ದರು.
ತಾಳಮದ್ದಳೆ ‘ಸತೀಶಕ್ತಿ’:
ಸಮಾರೋಪದ ಬಳಿಕ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರಿಂದ ಸಪ್ತಾಹದ 7ನೆಯ ಕಾರ್ಯಕ್ರಮ ‘ಸತೀಶಕ್ತಿ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ|ಎಂ.ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ , ಗಣರಾಜ ಕುಂಬಳೆ, ರಮೇಶ ಸಾಲ್ವಣ್ಕರ್ , ಉಮೇಶ ಆಚಾರ್ಯ ಗೇರುಕಟ್ಟೆ, ಹರಿಶ್ಚಂದ್ರ ನಾಯಗ ಮಾಡೂರು ಮತ್ತು ಪ್ರವೀಣ್ ರೈ ಎಲಿಯಾರ್ ಅರ್ಥಧಾರಿಗಳಾಗಿದ್ದರು. ಪ್ರಶಾಂತ ರೈ ಪುತ್ತೂರು ಅವರ ಭಾಗವತಿಕೆಗೆ ಹಿಮ್ಮೇಳದಲ್ಲಿ ಕೋಳ್ಯೂರು ಭಾಸ್ಕರ ಮತ್ತು ಲವಕುಮಾರ್ ಐಲ ಸಹಕರಿಸಿದರು.

LEAVE A REPLY

Please enter your comment!
Please enter your name here