ಕಾರವಾರ: ಊಟ ಮಾಡುತ್ತಿದ್ದ ವೇಳೆ ಅನ್ನ ಗಂಟಲಿಗೆ ಸಿಲುಕಿ ಯುವಕ ಸಾವನಪ್ಪಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಮಾಳಸವಾಡ ಗ್ರಾಮದಲ್ಲಿ ದುರಂತ ಘಟನೆಯೊಂದು ನಡೆದಿದೆ. ಊಟ ಮಾಡುವಾಗ ಅನ್ನ ಗಂಟಲಿನಲ್ಲಿ ಸಿಲುಕಿ ಅಮಿತ್ ಮಾಳಸೇರ್ (38) ಎಂಬ ಯುವಕ ಸಾವನ್ನಪ್ಪಿದ್ದಾನೆ. ಈ ಘಟನೆಯು ಸ್ಥಳೀಯ ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಅಮಿತ್ ಮಾಳಸೇರ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ. ತನ್ನ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ, ಅನ್ನದ ಗಂಟು ಗಂಟಲಿನಲ್ಲಿ ಸಿಲುಕಿಕೊಂಡು ತೀವ್ರ ಉಸಿರಾಟದ ತೊಂದರೆಗೆ ಒಳಗಾದ. ಈ ವೇಳೆ ಮನೆಯವರು ತಕ್ಷಣ ನೀರು ಕುಡಿಸಿದರು, ಆದರೂ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಕುಟುಂಬಸ್ಥರು ತಕ್ಷಣ ಆಂಬುಲೆನ್ಸ್ ಕರೆದು ಅಮಿತ್‌ನನ್ನು ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ, ವೈದ್ಯರು ಪರೀಕ್ಷಿಸಿದಾಗ ಅಮಿತ್ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು. ವೈದ್ಯರ ಪ್ರಕಾರ, ಗಂಟಲಿನಲ್ಲಿ ಅನ್ನ ಸಿಲುಕಿಕೊಂಡು ಉಸಿರಾಟಕ್ಕೆ ಕಷ್ಟವಾಗಿದ್ದು, ಇದೇ ಅವರ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

