ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ: ಸತ್ತ ಮೇಲು ಬದುಕಿರುವಂತ ಶಾಶ್ವತ ಕೆಲಸವನ್ನು ಸಾಧಿಸಿ ತೋರಿಸಬೇಕಾಗಿದೆ. ಜೇನು ಮಾಡುವ ಶಕ್ತಿ, ರೆಕ್ಕೆಯ ಶಕ್ತಿಯಿಂದ ಖುಷಿಯ ಸ್ವರ್ಗವನ್ನು ನಿರ್ಮಿಸಬೇಕಾಗಿದೆ. ಆದುದರಿಂದ ಯುವಕರು ತಂದೆ ತಾಯಿಯರ ಮುಂದೆ ತಲೆತಗ್ಗಿಸಬೇಕೇ ಹೊರತು ತಂದೆ ತಾಯಿಯರೇ ಇತರರ ಮುಂದೆ ತಲೆತಗ್ಗಿಸುವಂತಹ ಆಗಬಾರದು. ಅಂತಹ ಫಲ ನೀಡುವ ಹೆಮ್ಮರವಾಗಿ ಬೆಳೆಯಿರಿ ಎಂದು ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಸಭಾಧ್ಯಕ್ಷ ಪೀಠದಿಂದ ಆಶಿಸಿದರು.

ಅವರು ನವೆಂಬರ್ 20ರಂದು ಮೂಡುಬಿದಿರೆ ಕೋ ಆಪರೇಟಿವ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮದ ಕೊನೆಯ ದಿನದ ಯುವಜನ ಸೇವೆ-ಸಹಕಾರ ವಿಷಯವಾಗಿ ಮಾತನಾಡಿದರು. ದಿಕ್ಸೂಚಿ ಭಾಷಣವನ್ನು ಮಾಡಿದ ಅಜ್ಜರಕಾಡು ಮಹಿಳಾ ಕಾಲೇಜಿನ ಪ್ರಾಂಶುಪಾಲೆ ನಿಕೇತನ ಶೆಟ್ಟಿ ಮಾತನಾಡಿ ಕಾಯಕವೇ ಕೈಲಾಸದ ಕಾರ್ಯ ಶಿಕ್ಷಣ, ಉದ್ಯಮಶೀಲತೆ, ಸಮಾಜದ ಯುವಕರಲ್ಲಿ ವಿವೇಕ, ವೈಚಾರಿಕ ಪ್ರಜ್ಞೆಯಿಂದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಒಡಮೂಡಿಸಿಕೊಂಡು ಗುಣಮಟ್ಟದಿಂದ ಮತ್ತು ಪ್ರೀತಿಯಿಂದ ಬೆಳೆದಲ್ಲಿ ನಗುಮುಖದ ತಾಯ್ತನದ ಸೇವೆ ಎಲ್ಲರಿಂದಲೂ ಸಾಧ್ಯ ಇದೆ ಎಂದು ನೆನಪಿಸಿದರು.

ಯುವ ಮನಸ್ಸುಗಳು ಸಹಕಾರ ತತ್ವದ ಅಡಿ ಸದಸ್ಯತ್ವವನ್ನು ಪಡೆದು ಅಭಿನಂದನೀಯ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಂಗಳೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿ ಎಸ್ ರಾವ್ ಅವರು ಅಭಿನಂದಿಸಿದರು. ಕಸವನ್ನು ವಿಂಗಡಿಸಿ ಸ್ವತಹ ಪರಿಸರವನ್ನು ಕಾಪಾಡಿ, ಹಸಿರೇ ಉಸಿರಾಗಿ ಬದುಕಿನ ಸಾರ್ಥಕ್ಯವನ್ನು ಪಡೆದುಕೊಳ್ಳಿ ಎಂದು ಸ್ವಚ್ಛತೆಯ ಹರಿಕಾರ ಮಾಜಿ ಪುರಸಭಾ ಮುಖ್ಯ ಅಧಿಕಾರಿ ರಾಯಪ್ಪ ನೆನಪಿಸಿದರು. ಸಾಲ ಪಡೆದರೂ ಸಕಾಲದಲ್ಲಿ ಹಿಂದಿರುಗಿಸಿ ಅಭಿವೃದ್ಧಿಗೆ ಕೈಜೋಡಿಸಿ ಸಹಕರಿಸಿ ಎಂದು ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ ಜಿ ಕೇಳಿಕೊಂಡರು. 1904 ರಲ್ಲಿ ಗದಗ್ ನಲ್ಲಿ ಪ್ರಾರಂಭಗೊಂಡ ಸಹಕಾರ ಸಂಘಗಳು, ಸ್ವಾಮಿನಾಥನ್, ಇತ್ಯಾದಿಯರನ್ನು ನೆನಪಿಸಿಕೊಂಡ ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ 12 ವರ್ಷಗಳಿಂದ ನಿರಂತರವಾಗಿ ಏಳು ದಿನಗಳೂ ಕಾರ್ಯಕ್ರಮ ನಡೆಸುತ್ತಿರುವ ಏಕಮೇವ ಸಂಸ್ಥೆ ಎಂದು ಹೆಮ್ಮೆ ಪಟ್ಟರು.

ಇದೇ ಸಂದರ್ಭದಲ್ಲಿ ಸೊಸೈಟಿಯಿಂದ ಈ ವರ್ಷ ನಿವೃತ್ತರಾಗಲಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುವೀರ ಕಾಮತ್, ಹಾಗೂ ಜವಾನ ಶೇಖರ ಅವರನ್ನು ಸನ್ಮಾನಿಸಿ ಬಿಳ್ಕೊಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ರಾಜೇಶ ಸೇರ್ವೆಗಾರ್, ರಾಜು, ಮಡಿವಾಳ, ಸೂರಜ್ ಜೈನ್, ಮೋಹನ ದೇವಾಡಿಗ, ವಿಶ್ವನಾಥ ದೇವಾಡಿಗ, ಅಬೂಬಕ್ಕರ್, ಪದ್ಮನಾಭ ದೇವಾಡಿಗ, ಗೋಪಾಲ ಸುವರ್ಣ, ಸಂಜೀವ ಪೂಜಾರಿ ಯರನ್ನು ಸನ್ಮಾನಿಸಲಾಯಿತು.
ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ತಮ್ಮ ಪ್ರಾಸ್ತಾವಿಕ ಸ್ವಾಗತ ಭಾಷಣದಲ್ಲಿ 120 ಕೋಟಿ ಸ್ವಂತ ನಿಧಿ ಹೊಂದಿದ್ದು ಲೆಕ್ಕ ಪರಿಶೋಧನೆಯಲ್ಲಿ ಎ ಗ್ರೇಡ್ ಪಡೆದರೂ, ಸರಕಾರದಿಂದ ಯಾವುದೇ ಸಹಾಯಧನವಿಲ್ಲದೆ ಮಂಚೂಣಿಯಲ್ಲಿರುವ ಸಂಸ್ಥೆ ಎಂದು ಹೆಮ್ಮೆಯಿಂದ ನುಡಿದರು. ಗಣೇಶ್ ಕಾಮತ್ ಅತಿಥಿಗಳ ಪರಿಚಯ ಗೈದರು. ಚೇತನಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸುದರ್ಶನ್ ಭಟ್ ವಂದಿಸಿದರು.
.

