ಉಡುಪಿ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಪತ್ನಿ ಸೌಮ್ಯ ಶೆಟ್ಟಿ ಎಂಬಾಕೆಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಬಿ. ದಾಮೋದರ ಅವರ ಪುತ್ರ ಸುದೀಪ್ ಹಾಗೂ ಕುಕ್ಕುಂದೂರು ಹಿಮ್ಮುಂಜೆಯ ಸೌಮ್ಯ ಶೆಟ್ಟಿ ಫೆಬ್ರವರಿ 17ರಂದು ಪುತ್ತೂರಿನಲ್ಲಿ ವಿವಾಹ ನೊಂದಾಯಿಸಿದ್ದರು. ಮದುವೆಯ ನಂತರ ದಂಪತಿ ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ವಾಸವಾಗಿದ್ದರು.
ಮಾರ್ಚ್ 17ರಂದು ಸುದೀಪ್ ತನ್ನ ತಾಯಿಯೊಂದಿಗೆ ಕಾರಿನಲ್ಲಿ ಪೂಜಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ, ನೆಲ್ಯಾಡಿ ಪೇಟೆಯ ಬಳಿ ಸೌಮ್ಯ ತನ್ನ ಸ್ಕೂಟಿಯಲ್ಲಿ ಬಂದು ಕಾರನ್ನು ಅಡ್ಡಗಟ್ಟಿದ್ದಳು. ಈ ವೇಳೆ ಸುದೀಪ್‌ಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದಿದ್ದ ಸುದೀಪ್ ಮಾರ್ಚ್ 22ರಂದು ವಿಷ ಸೇವಿಸಿದ್ದರು.
ವಿಷ ಸೇವಿಸಿದ ಸುದೀಪ್ ಅವರನ್ನು ತಕ್ಷಣ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆ ಹಾಗೂ ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸುದೀಪ್ ಮೃತಪಟ್ಟಿದ್ದರು. ಸೌಮ್ಯ ಶೆಟ್ಟಿ ನೀಡಿದ ಮಾನಸಿಕ ಚಿತ್ರಹಿಂಸೆಯೇ ತನ್ನ ಮಗನ ಆತ್ಮಹತ್ಯೆಗೆ ಕಾರಣ ಎಂದು ತಂದೆ ದಾಮೋದರ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ತನಿಖೆಯನ್ನು ಕಾರ್ಕಳ ನಗರ ಠಾಣೆಯ ಪ್ರಭಾರ ನಿರೀಕ್ಷಕ ಮಂಜಪ್ಪ ಡಿ.ಆರ್. ಅವರಿಗೆ ವಹಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಪೊಲೀಸರು, ಶನಿವಾರ (ಏಪ್ರಿಲ್ 11) ಆರೋಪಿ ಸೌಮ್ಯ ಶೆಟ್ಟಿಯನ್ನು ದಸ್ತಗಿರಿ ಮಾಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

