ರಕ್ತದಾನದ ಮಹತ್ಕಾರ್ಯದಲ್ಲಿ ಯುವಕರು ಕೈಜೋಡಿಸಿ: ಜಿಲ್ಲಾಧಿಕಾರಿ

0
26


ಉಡುಪಿ: ದಾನಗಳಲ್ಲೇ ಅತ್ಯಂತ ಶ್ರೇಷ್ಠ ದಾನ ರಕ್ತದಾನ. ಓರ್ವನ ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು. ಹೀಗಾಗಿಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಕಾರ್ಯಗಳಲ್ಲಿ ಕೈಜೋಡಿಸಿ ಜನರ ಜೀವ ಉಳಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್​ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ, ರಕ್ತನಿಧಿ ಕೇಂದ್ರ, ಯೂತ್​ ರೆಡ್​ ಕ್ರಾಸ್​, ರಾಷ್ಟ್ರೀಯ ಸೇವಾ ಯೋಜನೆ, ಪೂರ್ಣ ಪ್ರಜ್ಞ (ಸ್ವಾಯತ್ತ) ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ- ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಪಘಾತ ಪ್ರಕರಣಗಳಾಗುತ್ತವೆ. ಜಿಲ್ಲೆಯಲ್ಲಿ ಸರಾಸರಿ 500 ರಿಂದ 600 ಅಪಘಾತ ಪ್ರಕರಣಗಳು ದಾಖಲಾಗುತ್ತವೆ. ಅಪಘಾತ ಸಂದರ್ಭಗಳಲ್ಲಿ ಅತಿ ಹೆಚ್ಚು ರಕ್ತಸ್ರಾವದಿಂದಾಗಿ ಸಾವು-ನೋವುಗಳಾಗುತ್ತವೆ. ಇಂತಹ ತುರ್ತು ಸಮಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಯುವಕರು ರಕ್ತದಾನ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ತುರ್ತು ಸಂದರ್ಭಗಳಲ್ಲಿ ಜೀವದಾನ ಮಾಡಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಿದ್ದು ಯುವಕರು ಇವರಿಂದ ಸ್ಪೂರ್ತಿ ಪಡೆದು ಸ್ವಯಂ ಪ್ರೇರಿತ ರಕ್ತದಾನ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ 50ಕ್ಕಿಂತಲೂ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್​., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಡಾ. ಬಸವರಾಜ ಜಿ. ಹುಬ್ಬಳ್ಳಿ, ಜಿಲ್ಲಾ ಸರ್ಜನ್​ ಡಾ. ಹೆಚ್​ ಅಶೋಕ, ಪೂರ್ಣ ಪ್ರಜ್ಞ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ ನ ನಿರ್ದೇಶಕ ಡಾ.ಪಿ.ಎಸ್​. ಐತಾಳ್​, ಕುಂದಾಪುರ ರೆಡ್​ ಕ್ರಾಸ್​ ಸಭಾಪತಿ ಎಸ್​. ಜಯಕರ ಶೆಟ್ಟಿ, ಉಡುಪಿ ರೆಡ್​ ಕ್ರಾಸ್​ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರ್​, ರೆಡ್​ ಕ್ರಾಸ್​ ಖಜಾಂಜಿ ರಮಾದೇವಿ ಪೂರ್ಣ ಪ್ರಜ್ಞ ಕಾಲೇಜಿನ ಐಕ್ಯೂಎಸಿ ಸಂಯೋಜಕ ವಿನಯ್​ ಕುಮಾರ್​.ಡಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಚಿದಾನಂದ ಸಂಜು ಎಸ್​.ವಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here