ಕೊಚ್ಚಿ: ತಿಂಗಳ ಹಿಂದಷ್ಟೇ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣ ಕೇರಳದ ಆಲಪ್ಪುಳದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಕ್ಲಾಸ್‌ಮೇಟನ್ನು ನಿನ್ನೆಯಷ್ಟೇ ಪೊಲೀಸರು ಬಂಧಿಸಿದ್ದರು. ಈ ಘಟನೆ ಮಾಸುವ ಮೊದಲೇ ಈಗ 10ನೇ ತರಗತಿ ವಿದ್ಯಾರ್ಥಿನಿಯೋರ್ವಳು 8 ತಿಂಗಳ ಗರ್ಭಿಣಿಯಾಗಿರುವ ಪ್ರಕರಣವೊಂದು ಕೇರಳದಿಂದ ವರದಿಯಾಗಿದೆ.
ಎರ್ನಾಕುಲಂ ಚೆಂಬರಕ್ಕಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನು ಬಲತ್ಕಾರ ಮಾಡಿ ಗರ್ಭಿಣಿಯನ್ನಾಗಿಸಲಾಗಿದೆ. ಘಟನೆಗೆ ಸಂಬಂಧಿಸಿದ ನೆರೆಮನೆಯ 55 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ತಮಿಳುನಾಡು ಮೂಲದ ರಾಜನ್ ಬಂಧಿತ ವ್ಯಕ್ತಿ. ಬಾಲಕಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ವೈದ್ಯರು ತಪಾಸಣೆ ನಡೆಸಿದ ವೇಳೆ ಆಕೆ ಗರ್ಭವತಿಯಾಗಿರುವುದು ಬೆಳಕಿಗೆ ಬಂದಿದೆ. ಆದರೆ ಈ ವಿಚಾರವನ್ನು ಪೋಷಕರು ಮಾನಕ್ಕೆ ಅಂಜಿ ಮುಚ್ಚಿಟ್ಟಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕಿಯ ಪಕ್ಕದ ಮನೆಯವನೇ ಆದ 55 ವರ್ಷದ ವ್ಯಕ್ತಿಯನ್ನು ತಡಿಯಿಟ್ಟಪರಂಬು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನವಾಗಿದೆ. ಇತ್ತೀಚೆಗೆ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಪೋಷಕರು ಹದಿಹರೆಯದ ಮಕ್ಕಳನ್ನು ಕಾಮುಕರ ಕಣ್ಣುಗಳಿಂದ ರಕ್ಷಿಸುವುದೇ ದೊಡ್ಡ ಸವಾಲಾಗಿದೆ. ಕೆಲವು ಪೋಷಕರಿಗಂತೂ ಹದಿಹರೆಯದ ಮಕ್ಕಳ ಮೇಲೆ ಗಮನವೇ ಇರುವುದಿಲ್ಲ, ಅಪ್ರಾಪ್ತ ಮಗಳು, ಮಗು ಹೆತ್ತ ನಂತರವೇ ಪ್ರಕರಣ ಬೆಳಕಿಗೆ ಬಂದತಹ ಹಲವು ಘಟನೆಗಳು ಸಮಾಜದಲ್ಲಿ ನಡೆದಿವೆ. ಮೊಬೈಲ್ ಪೋನ್ ಹಾಗೂ ಸೋಶಿಯಲ್ ಮೀಡಿಯಾಗಳು ಮಕ್ಕಳು ಹಾದಿ ತಪ್ಪುವುದಕ್ಕೆ ದೊಡ್ಡ ಪ್ರಮಾಣದ ಕೊಡುಗೆಯನ್ನೇ ನೀಡುತ್ತಿವೆ.