ಬಸ್ ಅಪಘಾತದಲ್ಲಿ 11 ಮಂದಿ ದುರ್ಮರಣ, ಹಲವರಿಗೆ ಗಂಭೀರ ಗಾಯ

0
199

ತಮಿಳುನಾಡು/ಶಿವಗಂಗೆ : ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ 11 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರಂತವೊಂದು ತಿರುಪತ್ತೂರು ತಾಲ್ಲೂಕಿನ ನಾಚಿಯಾರ್ಪುರಂ ಬಳಿಯಲ್ಲಿ ರವಿವಾರ(ನ.30) ಸಂಭವಿಸಿದೆ.ಕಾರೈಕುಡಿಯಿಂದ ದೇವಕೊಟ್ಟೆಗೆ ಸಾಗುತ್ತಿದ್ದ ಬಸ್ ಮತ್ತು ದೇವಕೊಟ್ಟೆನಿಂದ ದಿಂಡಿಗಲ್ ಕಡೆಗೆ ಹೊರಟಿದ್ದ ಇನ್ನೊಂದು ಬಸ್ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಬಳಿ ಪರಸ್ಪರ ಡಿಕ್ಕಿಯಾಗಿದೆ. ಬಸ್ ಚಾಲಕರ ಪೈಕಿ ಬಟ್ಟಗುಂಡು ಮೂಲದ ಪಿ.ಸೆಂದ್ರಯನ್(36) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡವರನ್ನು ಕಾರೈಕುಡಿ, ಶವಗಂಗಾ ಹಾಗೂ ತಿರುಪತ್ತೂರು ಸರ್ಕಾರಿ ಆಸ್ಪತ್ರೆ ದಾಖಲಿಸಲಾಯಿತು. ಜತೆಗೆ ಆರು ಮಂದಿಯನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಪಘಾತದಲ್ಲಿ ಒಂಬತ್ತು ಮಹಿಳೆಯರು ಹಾಗೂ ಇಬ್ಬರು ಪುರುಷರು ಸಾವಿಗೀಡಾಗಿದ್ದಾರೆ. ಘಟನೆ ಬಳಿಕ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕಿರಿದಾದ ರಸ್ತೆ ಮತ್ತು ಅತಿವೇಗ ಅಪಘಾತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಪರಿಹಾರ ಘೋಷಣೆ : ಚೆನ್ನೈನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂ, ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂ, ಹಾಗೂ ಸಣ್ಣ ಪ್ರಮಾಣದಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಘೋಷಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here