ಇರುವೈಲಿನಲ್ಲಿ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0
4


ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ; ಅಶಕ್ತ ಕುಟುಂಬಕ್ಕೆ ವೈದ್ಯಕೀಯ ನೆರವು, ವಿದ್ಯಾರ್ಥಿವೇತನ

ಮೂಡುಬಿದಿರೆ: ಇರುವೈಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಕಾಂತ ಶೆಟ್ಟಿ ಉದ್ಘಾಟಿಸಿ, ಧಾರ್ಮಿಕ ಉಪನ್ಯಾಸ ನೀಡಿದರು. ಸಮಿತಿಯ ಅಧ್ಯಕ್ಷ ಸೋಮಶೇಖರ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಣೇಶೋತ್ಸವ ಸಮಿತಿಯ ನೂತನ ಕಚೇರಿಗೆ ಸ್ಥಳ ದಾನ ನೀಡಿದ ನಾಗಮ್ಮ ಪೂಜಾರಿ ತಂಗಿಲ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಂಶೋಧನೆಯ ಮೂಲಕ ಡಾಕ್ಟರೇಟ್ ಪದವಿ ಪಡೆದ ಮಲ್ಲಿಕಾ ರಾಜೇಶ್ ಶೆಟ್ಟಿ ಪುಚ್ಚಮೊಗರು ಅವರನ್ನು ಸನ್ಮಾನಿಸಲಾಯಿತು. ಕಂಬಳ ಕ್ಷೇತ್ರದಲ್ಲಿ ಈ ವರ್ಷದ ‘ಸರಣಿ ಶ್ರೇಷ್ಠ ಯಜಮಾನ’ ಪ್ರಶಸ್ತಿಗೆ ಭಾಜನರಾದ ಜಗದೀಶ್ ಎಂ. ಶೆಟ್ಟಿ ದೊಡ್ಡಗುತ್ತು ಅವರನ್ನು ಗೌರವಿಸಲಾಯಿತು.

ಸಮಿತಿಯ ಚಟುವಟಿಕೆಗಳಿಗೆ ನಿರಂತರ ಸಹಕಾರ ನೀಡುತ್ತಿರುವ ದಾನಿಗಳಾದ ಸುರೇಶ್ ಶೆಟ್ಟಿ (ಹರಿಮೀನಾಕ್ಷಿ ದೋಟ, ಮಿಜಾರು) ಹಾಗೂ ಲೋಕೇಶ್ ಪೂಜಾರಿ ಕಂಕನಾಡಿ ಅವರನ್ನು ಗೌರವಾರ್ಪಣೆ ಮಾಡಲಾಯಿತು.

ಸಮಿತಿಯ ವತಿಯಿಂದ ಸಾಮಾಜಿಕ ಬದ್ಧತೆಯ ಅಂಗವಾಗಿ ಅಶಕ್ತ ಕುಟುಂಬವೊಂದಕ್ಕೆ ವೈದ್ಯಕೀಯ ಧನಸಹಾಯ ನೀಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಮೂಲಕ ಶೈಕ್ಷಣಿಕ ಪ್ರೋತ್ಸಾಹ ನೀಡಲಾಯಿತು.

ಕಾರ್ಯಕ್ರಮದಲ್ಲಿ ಯತೀಶ್ ಕರ್ಕೇರ ಸ್ವಾಗತಿಸಿದರು. ಸತೀಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಅಮೀನ್ ಧನ್ಯವಾದ ಸಮರ್ಪಿಸಿದರು.