ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆಯನ್ನು ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ದಿನಾಂಕ 28 – 08 -2026 ರಂದು ಶುಕ್ರವಾರ ನಡೆಸಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿದ ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ ಮಾತನಾಡಿ ನಮ್ಮ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿಯವರು ನಿಗಮದ ಮೂಲಕ ಬಿಲ್ಲವ ಸಮುದಾಯಕ್ಕೆ ಸೇವೆ ನೀಡುವ ಆಶಯ ಹೊಂದಿದ್ದಾರೆ, ಸಮಾಜದ ಅಭಿವೃದ್ಧಿ ಆಗಬೇಕು ಎಲ್ಲಾ ರಂಗಗಳಲ್ಲೂ ಬಿಲ್ಲವರು ಮುಂಚೂಣಿಯಲ್ಲಿ ಇರಬೇಕು ಎಂದು ಬಯಸುವ ಅವರ ಸಾಮಾಜಿಕ ಜೀವನ ಯಶಸ್ಸು ದೊರೆಯಲಿ. ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಹೋತ್ಸವ ಯಶಸ್ವಿಗೊಳಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಮಾತಿಬೆಟ್ಟು ಪ್ರಕಾಶ್ ಪೂಜಾರಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ಕೇವಲ ಒಂದು ರಾಜ್ಯ, ಜಾತಿ, ಧರ್ಮ ಮತ್ತು ಬಿಲ್ಲವ ಸಮಾಜಕ್ಕೆ ಸೇರಿದವರು ಅಲ್ಲ, ವಿಶ್ವಕ್ಕೆ ಸೇರಿದವರು, ಸರ್ವರಿಗೂ ಸೇರಿದವರು, ಗುರುಗಳ ಸಂದೇಶ, ತತ್ವ ಸರ್ವಕಾಲಿಕ, ಇಂದಿನ ಸ್ಕಿಲ್ ಇಂಡಿಯಾ ಪರಿಕಲ್ಪನೆಯನ್ನು ನಾರಾಯಣ ಗುರುಗಳು 100 ವರ್ಷಗಳ ಹಿಂದೆಯೇ ಹೇಳಿದ್ದರು. ಅದಕ್ಕಾಗಿಯೇ ಶಿಕ್ಷಣದಿಂದ ಬಲಯುತರಾಗಿರಿ ಎಂದು ಸಾರಿದ್ದರು. ಕ್ರಾಂತಿ, ತತ್ವ ಸಂದೇಶದ ಮೂಲಕ ಬಿಲ್ಲವ ಸಮುದಾಯಕ್ಕೆ ಸಮಾಜದ ಬಾಗಿಲನ್ನು ತೆರೆಸಿದವರು. ಜಗತ್ತಿಗೆ ಬೆಳಕು ತೋರಿದ ನಾರಾಯಣ ಗುರುಗಳ ತತ್ವ ಸಿದ್ದಾಂತಗಳು ವಿಶ್ವಮಟ್ಟದಲ್ಲಿ ಪ್ರಚಲಿತವಾಗಿರುವುದು ನಮಗೆ ಹೆಮ್ಮೆಯಾಗಿದೆ, ಅವರ ತತ್ವವನ್ನು ಎಲ್ಲರೂ ಪಾಲಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹೆಬ್ರಿ ತಹಶೀಲ್ಧಾರ್ ರಾಕೇಶ್ ಫ್ರಾನ್ಸಿಸ್ ಬ್ರೀಟ್ಟೋ ಮಾತನಾಡಿ ನಾರಾಯಣ ಗುರುಗಳ ಜಯಂತಿಯು ಮಾನವೀಯತೆಯ ಹಬ್ಬವಾಗಿದೆ, ಮಾನವರು ಒಂದೇ ಎನ್ನುವ ಗುರುಗಳ ಸಂದೇಶಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ, ಸರ್ವರಿಗೂ ತಾಲ್ಲೂಕು ಆಡಳಿತ ಮೂಲಕ ಸೇವೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು.
ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆಯ ಶ್ರೀ ಗುರುರಕ್ಷಾ ಟ್ರಸ್ಟ್ ಮುದ್ರಾಡಿ ಮತ್ತು ಬೆಳ್ವೆ ಉದಯ ಕುಮಾರ್ ಪೂಜಾರಿಯವರು ಕೊಡಮಾಡಿದ ವಿಧ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ ಅಣ್ಣಪ್ಪ ಪೂಜಾರಿ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ, ಹೆಬ್ರಿ ತಾಲೂಕು ಶಿಕ್ಷಣ ಅಧಿಕಾರಿ ರವಿಚಂದ್ರ ಕಾರಂತ್, ಅರಣ್ಯ ಇಲಾಖೆಯ ಅಧಿಕಾರಿ ಜಯರಾಮ ಪೂಜಾರಿ, ಪೊಲೀಸ್ ಇಲಾಖೆಯ ರಾಜ್ ಕುಮಾರ್, ಬೆಳ್ವೆ ಬಿಲ್ಲವ ಸಂಘದ ಅಧ್ಯಕ್ಷರಾದ ಅಧ್ಯಕ್ಷರಾದ ರಾಜೀವ ಎಸ್ ಪೂಜಾರಿ ಬೆಳ್ವೆ, ಮುನಿಯಾಲು ಬಿಲ್ಲವ ಸಂಘದ ಅಧ್ಯಕ್ಷರಾದ ಟಿ.ಮಂಜುನಾಥ ಪೂಜಾರಿ ಕಾಡುಹೊಳೆ, ಶಿವಪುರದ ಬಿಲ್ಲವ ಸಂಘದ ಅಧ್ಯಕ್ಷರಾದ ದಿವಾನಂದ ಸಾಲ್ಯಾನ್, ಬೆಳ್ವೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಪೂಜಾರಿ, ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್, ಶಶಿಕಲಾ ಡಿ ಪೂಜಾರಿ, ಶಶಿಕಲಾ ಆರ್ ಪಿ, ಅದರ್ಶ ಪೂಜಾರಿ ಮುದ್ರಾಡಿ, ಬಿಲ್ಲವ ಸಮುದಾಯದ ವಿವಿಧ ಮುಖಂಡರು, ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಬ್ರಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿ ಸ್ವಾಗತಿಸಿದರು. ಪ್ರಭಾಕರ ಪೂಜಾರಿ ವಂದಿಸಿದರು.

