ಹೃದಯಾಘಾತಕ್ಕೆ 19 ವರ್ಷದ ಯುವಕ ಸಾವು

0
651

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪಕರಣಗಳು ಹೆಚ್ಚುತ್ತಿದ್ದು, ಇದು ಪೋಷಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯಕರವಾಗಿದ್ದರೂ ಯುವಕರಲ್ಲಿ ಹೃದಯಾ ಘಾತದ ಪ್ರಮಾಣ ಏರಿಕೆಯಾಗುತ್ತಿರುವುದು ಕಳವಳಕಾರಿಯಾಗಿದೆ.

ಈ ಸರಣಿಯಲ್ಲಿ ಮತ್ತೊಂದು ದುರಂತವಾಗಿ, ಬೆಂಗಳೂರಿನ ಜೆಪಿ ನಗರದಲ್ಲಿ 19 ವರ್ಷದ ಯುವಕ ನಿಶಾಂತ್ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರದ ನಿವಾಸಿಯಾಗಿದ್ದ ನಿಶಾಂತ್ ಗೌಡ, ಕಳೆದ 15 ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದರು. ಜೆಪಿ ನಗರದ ಒಂದು ಪಿಜಿಯಲ್ಲಿ ವಾಸವಾಗಿದ್ದ ನಿಶಾಂತ್, ಡಿಪ್ಲೋಮಾ ಪದವಿಯನ್ನು ಪೂರೈಸಿ ಅಪ್ರೆಂಟಿಸ್ ಆಗಿ ಕೆಲಸಕ್ಕೆ ಸೇರಿದ್ದರು. ಜೊತೆಗೆ, ಪುಡ್ ಡೆಲಿವರಿ ಕೆಲಸವನ್ನೂ ಮಾಡುತ್ತಿದ್ದರು.

ಘಟನೆಯ ದಿನ ರಾತ್ರಿ, ಸ್ನೇಹಿತರೊಂದಿಗೆ ಮಾತನಾಡುವ ವೇಳೆ ಎದೆನೋವಿನ ಕುರಿತು ನಿಶಾಂತ್ ತಿಳಿಸಿ ಮಲಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಬೆಳಗ್ಗೆ ಸ್ನೇಹಿತರು ಎಂದಿನಂತೆ ಎದ್ದೇಳದ ನಿಶಾಂತ್‌ನನ್ನ ಗಮನಿಸಿ ನೋಡಿದಾಗ ಅದಾಗಲೇ ಮೃತಪಟ್ಟಿದ್ಯಾನ. ಘಟನೆಯ ಕುರಿತು ಮಾಹಿತಿ ಪಡೆದ ಜೆಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಶಾಂತ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಅಪಮೃತ್ಯು ಪ್ರಕರಣ ದಾಖಲಾಗಿದೆ. ಈ ಘಟನೆಯಿಂದಾಗಿ ನಿಶಾಂತ್ ಅವರ ಕುಟುಂಬ ಹಾಗೂ ಸ್ನೇಹಿತರಲ್ಲಿ ಆಘಾತ ಮೂಡಿದೆ.

ಯುವಕರಲ್ಲಿ ಹೃದಯಾ ಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ತಜ್ಞರನ್ನೂ ಕಳವಳಗೊಳಿಸಿದೆ. ಒತ್ತಡ, ಜೀವನಶೈಲಿ ಬದಲಾವಣೆ, ಮತ್ತು ಆರೋಗ್ಯ ತಪಾಸಣೆಯ ಕೊರತೆ ಇದಕ್ಕೆ ಕಾರಣವಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

LEAVE A REPLY

Please enter your comment!
Please enter your name here