300 ಅಡಿ ಬೋರ್‌ವೆಲ್‌ಗೆ ಬಿದ್ದ 3 ವರ್ಷದ ಬಾಲಕ ರಕ್ಷಣೆ : 10 ಗಂಟೆಗಳ ಕಾರ್ಯಾಚರಣೆ ಯಶಸ್ವಿ

0
21

Punjab : ಪದೇ ಪದೇ ದೇಶದಲ್ಲಿ ನಡೆಯುತ್ತಿರುವ ಬೋರ್‌ವೆಲ್ ದುರಂತಗಳ ನಡುವೆಯೇ, ಪಂಜಾಬ್‌ನ Hoshiarpur ಜಿಲ್ಲೆಯಲ್ಲಿ 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಮೂರು ವರ್ಷದ ಬಾಲಕನನ್ನು ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ.

ಶುಕ್ರವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಬಾಲಕ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೋರ್‌ವೆಲ್‌ಗೆ ಬಿದ್ದಿದ್ದಾನೆ. ಸುಮಾರು 90 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮಗ ಬೋರ್‌ವೆಲ್‌ಗೆ ಬಿದ್ದಿರುವುದನ್ನು ಗಮನಿಸಿದ ಕುಟುಂಬಸ್ಥರು ಸಹಾಯಕ್ಕಾಗಿ ಕೂಗಿದ್ದಾರೆ. ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ತಂಡಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ National Disaster Response Force (NDRF), State Disaster Response Force (SDRF), ಜಿಲ್ಲಾಡಳಿತ, ಸ್ಥಳೀಯರು ಹಾಗೂ ವಿವಿಧ ಸ್ವಯಂಸೇವಾ ಸಂಘಟನೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡವು.

ಬೋರ್‌ವೆಲ್ ಒಳಗೆ ಕ್ಯಾಮೆರಾ ಹಾಗೂ ಆಮ್ಲಜನಕ ಪೈಪ್ ಅಳವಡಿಸಿ ಬಾಲಕನ ಸ್ಥಿತಿಯನ್ನು ಗಮನಿಸಲಾಗುತ್ತಿತ್ತು. ಮತ್ತೊಂದೆಡೆ ಜೆಸಿಬಿ ಯಂತ್ರಗಳ ಸಹಾಯದಿಂದ ಸಮಾಂತರ ಗುಂಡಿ ತೋಡಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಯಿತು.

ಒಂದೆಡೆ ಪೋಷಕರು ಮಗನಿಗಾಗಿ ಕಣ್ಣೀರಿಟ್ಟು ದೇವರಲ್ಲಿ ಪ್ರಾರ್ಥಿಸುತ್ತಿದ್ದರೆ, ಮತ್ತೊಂದೆಡೆ ರಕ್ಷಣಾ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿದರು. ಹಲವು ಅಡ್ಡಿ-ಆತಂಕಗಳ ನಡುವೆಯೂ ಸುಮಾರು 10 ಗಂಟೆಗಳ ಶ್ರಮದ ಬಳಿಕ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆದು ಜೀವ ಉಳಿಸುವಲ್ಲಿ ತಂಡ ಯಶಸ್ವಿಯಾಯಿತು.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಕ್ಷಣಾ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here