ಹೊಸ ಬಿಎಸ್​ಎನ್​ಎಲ್​ ಟವರ್​ ಅಳವಡಿಕೆಗೆ 39 ನಿವೇಶನ ಮಂಜೂರು

0
4

ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ಇರುವ ಬಿ.ಎಸ್​.ಎನ್​.ಎಲ್​ ಸ್ಥಾವರಗಳನ್ನು 3ಜಿ ಯಿಂದ 4 ಜಿ ಗೆ ಬದಲಾವಣೆ ಮಾಡುವುದರೊಂದಿಗೆ ಗ್ರಾಹಕರಿಗೆ ಉತ್ತಮ ರೀತಿಯ ಸೇವೆಗಳನ್ನು ಒದಗಿಸಬೇಕು. ಹೊಸದಾಗಿ ಟವರ್​ಗಳನ್ನು ನಿಮಾರ್ಣ ಮಾಡಲು ಜಿಲ್ಲಾಡಳಿತದಿಂದ ಬೇಡಿಕಗನುಗುಣವಾಗಿ 39 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ನಡೆದ ಬಿಎಸ್​ಎನ್​ಎಲ್​ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪೆರ್ಡೂರಿನ ಕುಕ್ಕುಂಡಿಯ ನಿವೇಶನದಲ್ಲಿ ಮರತೆರವಿನ ಕಾರ್ಯಗಳನ್ನು ಅರಣ್ಯ ಇಲಾಖೆ ಶ್ರೀ ಮಾಡಬೇಕು. ಟವರ್​ಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿ ನೆಟ್​ವರ್ಕ್​ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಬೇಕು. ಜಿಲ್ಲೆಯ ಎಲ್ಲಾ ಸ್ಥಾವರಗಳಿಗೆ ಡಿ.ಜಿ. ಸೆಟ್​ಗಳನ್ನು ಅಳವಡಿಸಬೇಕು. ಪವರ್​ಪ್ಲಾಂಟ್​ ನಿರಂತರವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಅವಶ್ಯವಿರುವಲ್ಲಿ ಬ್ಯಾಟರಿ ಅಥವಾ ಸೋಲಾರ್​ ಬ್ಯಾಟರಿಗಳ ಅಳವಡಿಸಬೇಕು ಎಂದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಹಾಗೂ ಹತ್ತಿರದ ಆಸ್ಪತ್ರೆಗಳಲ್ಲಿಯೂ ನೆಟ್​ವರ್ಕ್​ ಸಮಸ್ಯೆ ಕಂಡು ಬರುತ್ತಿದೆ. ಸಮಸ್ಯೆಗಳನ್ನು ಪರಿಹರಿಸಿ ನೆಟ್​ವರ್ಕ್​ನಲ್ಲಿ ಸುಧಾರಣೆ ತರಬೇಕು. ಜಿಲ್ಲೆಯಲ್ಲಿ ಇನ್ನು ಮುಂದೆ ಪ್ರತಿ ತಿಂಗಳೂ ಸಭೆ ನಡೆಯಲಿದೆ. ಕಾಪು ಮತ್ತು ಕಮಲಶಿಲೆಯಂತ ಪ್ರೇಕ್ಷಣಿಯ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ನೆಟ್​ವರ್ಕ್​ ಸಮಸ್ಯೆಯ ದೂರುಗಳು ಬರುತ್ತಿವೆ. ಇದನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ಬ್ರಹ್ಮಾವರ ತಾಲೂಕಿನ ಕರ್ಜೆ ಮತ್ತು ಕಾಪುವಿನ ಕಟಪಾಡಿಯಲ್ಲಿ ಟವರ್​ಗೆ ವಿದ್ಯುತ್​ ಸಂಪರ್ಕ ಕಲ್ಪಿಸಲು ಹಾಗೂ ನಾಡ್ಪಾಲು- ಕಬ್ಬಿನಾಲೆ ಪರಿಸರದಲ್ಲಿ ಮರುಸರ್ವೆ ನಡೆಸಲು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಬಿಎಸ್​ಎನ್​ಎಲ್​ ಬೆಂಗಳೂರು ವಿಭಾಗದ ಸಿಜಿಎಂ ಸುಕುಮಾರನ್​ ಎನ್​.ಕೆ, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​, ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸುಧಾಕರ್​ ನಾಯಕ್​, ಪಿಜಿಎಂ ಬಿ.ವೆಂಕಟೇಶ್ವರಲು, ಮಂಗಳೂರು ಜಿಎಂ ಹೇಮಂತ್​ ಎಸ್​.ಬಿ. ಉಪಸ್ಥಿತರಿದ್ದರು.