ಚಾಮರಾಜನಗರ : ಅಡುಗೆ ಮನೆಯಲ್ಲಿ ಆನ್ ಆಗಿದ್ದ ಗ್ರೈಂಡರ್‌ನಿಂದ ವಿದ್ಯುತ್ ಪ್ರವಹಿಸಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯಲ್ಲಿ ನಡೆದಿದೆ.
ಪುಟ್ಟಮ್ಮ ಹಾಗೂ ಆನಂದ್ ದಂಪತಿಯ ಪುತ್ರಿ ಅದ್ವಿತಾ (4) ಮೃತ ದುರ್ದೈವಿ ಬಾಲಕಿ. ಮನೆಯಲ್ಲಿ ಆಟವಾಡುತ್ತಿದ್ದ ಅದ್ವಿತಾ ನೀರು ಕುಡಿಯುವ ಸಲುವಾಗಿ ಅಡುಗೆ ಮನೆಗೆ ತೆರಳಿದ್ದಳು. ಈ ವೇಳೆ ಅಡುಗೆ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರೈಂಡರ್ ಅನ್ನು ಮುಟ್ಟಿದ್ದಾಳೆ.
ಗ್ರೈಂಡರ್ ಸ್ಪರ್ಶಿಸಿದ ತಕ್ಷಣ ವಿದ್ಯುತ್ ಶಾಕ್ ತಗುಲಿ ಬಾಲಕಿ ಕುಸಿದು ಬಿದ್ದಿದ್ದಾಳೆ. ಕುಟುಂಬಸ್ಥರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ, ಪರೀಕ್ಷಿಸಿದ ವೈದ್ಯರು ಬಾಲಕಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ದುರಂತದಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನೆ ಕುರಿತು ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

