ಮಂಗಳೂರಿನಲ್ಲಿ ಸೆ.14ರಿಂದ 41ನೇ ವರ್ಷದ ವಿದ್ಯಾಗಣಪತಿ ಗಣೇಶೋತ್ಸವ

0
7

ಮಂಗಳೂರು: ಶ್ರೀ ವಿದ್ಯಾಗಣಪತಿ ಸೇವಾ ಟ್ರಸ್ಟ್ (ರಿ.), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವತಿಯಿಂದ 41ನೇ ವರ್ಷದ ಶ್ರೀ ವಿದ್ಯಾಗಣೇಶೋತ್ಸವವನ್ನು ಸೆ.14ರಿಂದ 18ರವರೆಗೆ ಐದು ದಿನಗಳ ಕಾಲ ಮಂಗಳೂರಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು.

ಸೆ.14ರಂದು 108 ತೆಂಗಿನಕಾಯಿ ಗಣಹೋಮ ಹಾಗೂ ಶ್ರೀ ವಿದ್ಯಾಗಣಪತಿ ದೇವರ ಪ್ರತಿಷ್ಠೆ ನಡೆಯಲಿದೆ. ಪ್ರತಿದಿನ ಸಂಜೆ 4ರಿಂದ 6ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಸೆ.17ರಂದು ಮಂಗಳೂರು ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಲಿದೆ.

ಉತ್ಸವದ ಅಂಗವಾಗಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ.14ರಂದು ಸಂಜೆ 6.30ಕ್ಕೆ ನೃತ್ಯ ಸುಧಾ (ರಿ.), ಮೇರಿಹಿಲ್ ಸಂಸ್ಥೆಯವರಿಂದ ಭರತನಾಟ್ಯ ಹಾಗೂ ರಾತ್ರಿ 8ಕ್ಕೆ ಶ್ರೀ ಸಾಯಿ ಮೆಲೋಡಿಸ್, ಮಂಗಳೂರು ಇವರಿಂದ ‘ಭಕ್ತಿ ರಸಮಂಜರಿ’ ನಡೆಯಲಿದೆ.

ಸೆ.15ರಂದು ಸಂಜೆ 6.30ಕ್ಕೆ ಆಕಾರ್ ನೃತ್ಯ ಅಕಾಡೆಮಿ, ಮಂಗಳೂರು ವತಿಯಿಂದ ‘ನೃತ್ಯ ವೈಭವ’ ಹಾಗೂ ಸಂಜೆ 7.30ಕ್ಕೆ ರಂಗಸಿರಿ ಸಾಂಸ್ಕೃತಿಕ ವೇದಿಕೆ, ಕಾಸರಗೋಡು ವತಿಯಿಂದ ‘ಶ್ರೀ ಏಕಾದಶಿ ದೇವಿ ಮಹಾತ್ಮೆ, ದಾಶರಥಿ ದರ್ಶನ’ ಯಕ್ಷಗಾನ ಬಯಲಾಟ ನಡೆಯಲಿದೆ.

ಸೆ.16ರಂದು ಸಂಜೆ 7ಕ್ಕೆ ಶಿವಗೌರಿ ಮಕ್ಕಳ ತಂಡ, ಕಾವೂರು ವತಿಯಿಂದ ‘ಭಕ್ತಿ ಸಂಗೀತ’ ಹಾಗೂ ರಾತ್ರಿ 8ಕ್ಕೆ ಶ್ರೀ ದುರ್ಗಾ ಕಲಾವಿದರು, ಹೊಯಿಗೆಗುಡ್ಡೆ–ಸಸಿಹಿತ್ಲು ಇವರಿಂದ ‘ಬಿತ್ತ್‌ಲ್ದ ಉಳ್ಳಾಲ್ದಿ ಅಪ್ಪೆ ಭಗವತಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಸೆ.17ರಂದು ಸಂಜೆ 7ಕ್ಕೆ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಯ ಮಕ್ಕಳಿಂದ ‘ಸಾಂಸ್ಕೃತಿಕ ವೈವಿಧ್ಯ’ ಹಾಗೂ ರಾತ್ರಿ 8ಕ್ಕೆ ವಿಧಾತ್ರಿ ಕಲಾವಿದೆರ್ ಕುಡ್ಲ ವತಿಯಿಂದ ವಿಜಯ್ ಕುಮಾರ್ ಕೊಡಿಯಲ್‌ಬೈಲು ನಿರ್ದೇಶನದ ‘ಜೈ ಹನುಮಾನ್’ ಸಿನಿ ನಾಟಕ ನಡೆಯಲಿದೆ.

ಸೆ.18ರಂದು ಸಂಜೆ 5.30ಕ್ಕೆ ಶ್ರೀ ವಿದ್ಯಾಗಣಪತಿ ದೇವರ ವೈಭವದ ಶೋಭಾಯಾತ್ರೆ ನಡೆಯಲಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಹೊರಡುವ ಶೋಭಾಯಾತ್ರೆಯು ಲಾಲ್‌ಭಾಗ್, ಮಣ್ಣಗುಡ್ಡ, ಬರ್ಕೆ, ಕುದ್ರೋಳಿ ಮಾರ್ಗವಾಗಿ ಸಾಗಿಬಂದು ಕುಡ್ತೇರಿ ಮಹಮ್ಮಾಯಿ ದೇವಸ್ಥಾನದಲ್ಲಿ ಜಲಸ್ಥಂಭನದೊಂದಿಗೆ ಗಣೇಶೋತ್ಸವ ಸಂಪನ್ನಗೊಳ್ಳಲಿದೆ.

ಐದು ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.