ಶಾಲಾ ವಾಹನದ ಮೇಲೆ ಬೃಹತ್ ಮರ ಉರುಳಿ 5 ವರ್ಷದ ಬಾಲಕಿ ದಾರುಣ ಸಾವು

0
89

ಬಂಟ್ವಾಳ : ಚಲಿಸುತ್ತಿದ್ದ ಶಾಲಾ ವಾಹನದ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಐದು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಗಾಯಗೊಂಡಿರುವ ದಾರುಣ ಘಟನೆ ಬಂಟ್ವಾಳ ತಾಲೂಕಿನ ಕಲ್ಲೇಟಿ ಸಮೀಪ ನಡೆದಿದೆ.

ಮೃತ ಬಾಲಕಿಯನ್ನು ಚಿರನ್ವಿ (5) ಎಂದು ಗುರುತಿಸಲಾಗಿದೆ. ಆಕೆ ಬಂಟ್ವಾಳ ತಾಲೂಕಿನ ಬಿಳಿಯೂರು ನಿವಾಸಿ ಚಂದ್ರಹಾಸ ಅವರ ಪುತ್ರಿಯಾಗಿದ್ದು, ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಕಲ್ಲೇಟಿ ಕಾನಲ್ತಾಯ ದೈವಸ್ಥಾನದ ಸಮೀಪ ಶಾಲಾ ವಾಹನ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಬೃಹತ್ ಮರ ವಾಹನದ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಚಿರನ್ವಿಯನ್ನು ಸ್ಥಳೀಯರು ತಕ್ಷಣ ಆಟೋದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ಗಾಯಗೊಂಡಿರುವ ಇನ್ನು ಇಬ್ಬರು ಮಕ್ಕಳಿಗೆ ಕಲ್ಲಡ್ಕ ಹಾಗೂ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿದು ಬಂಟ್ವಾಳ ತಹಶೀಲ್ದಾರ್ ಪುತ್ತೂರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತ ಬಾಲಕಿಯ ಕುಟುಂಬಕ್ಕೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಡಳಿತ ಭರವಸೆ ನೀಡಿದೆ.

ಈ ದುರ್ಘಟನೆಯಿಂದ ಶಾಲಾ ಮಕ್ಕಳು, ಪೋಷಕರು ಹಾಗೂ ಸ್ಥಳೀಯರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.