ನವದೆಹಲಿ : ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಚುರುಕುಗೊಂಡಿರುವ ಬೆನ್ನಲ್ಲೇ, ಈ ಕಾರ್ಯದಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳು (BLOಗಳು) ಹಾಗೂ ಬಿಎಲ್‌ಒ ಮೇಲ್ವಿಚಾರಕರಿಗೆ ಭಾರತೀಯ ಚುನಾವಣಾ ಆಯೋಗ ಸಿಹಿ ಸುದ್ದಿ ನೀಡಿದೆ.
ಪಂಜಾಬ್, ಹರಿಯಾಣ, ಚಂಡೀಗಢ ಸೇರಿದಂತೆ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿರುವ ಪ್ರತಿಯೊಬ್ಬ ಬಿಎಲ್‌ಒ ಹಾಗೂ ಬಿಎಲ್‌ಒ ಮೇಲ್ವಿಚಾರಕರಿಗೆ ವಾರ್ಷಿಕ ಸಂಭಾವನೆಯ ಜೊತೆಗೆ ₹6,000 ಒಂದು ಬಾರಿಯ ವಿಶೇಷ ಗೌರವಧನ ನೀಡಲು ಚುನಾವಣಾ ಆಯೋಗ ಅನುಮೋದನೆ ನೀಡಿದೆ.
ಮಂಗಳವಾರ ರಾತ್ರಿ ಹೊರಡಿಸಿದ ಆದೇಶದಲ್ಲಿ, ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಅಧಿಕಾರಿಗಳು ನಿರ್ವಹಿಸುತ್ತಿರುವ ಕೆಲಸದ ಪ್ರಮಾಣ ಹಾಗೂ ಅದರ ಮಹತ್ವವನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ₹6,000 ಗೌರವಧನ ವಾರ್ಷಿಕ ಸಂಭಾವನೆಯ ಜೊತೆಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ಪಾರದರ್ಶಕವಾಗಿ ಸಿದ್ಧಪಡಿಸುವಲ್ಲಿ ಬಿಎಲ್‌ಒಗಳು ಮತ್ತು ಮೇಲ್ವಿಚಾರಕರು ಪ್ರಮುಖ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಗೌರವಿಸಿ ಈ ವಿಶೇಷ ಪ್ರೋತ್ಸಾಹಧನ ಘೋಷಿಸಲಾಗಿದೆ.

