ಕಾಸರಗೋಡಿನಲ್ಲಿ ನ. 28, 29ರಂದು 8ನೇ ಕನ್ನಡ ಸಮ್ಮೇಳನ: 2,000 ಪ್ರತಿನಿಧಿಗಳಿಗೆ ಆಹ್ವಾನ

0
11

ಕೇರಳ–ಕರ್ನಾಟಕ ಉತ್ಸವ, ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ ಹಾಗೂ ಕನ್ನಡ ಗ್ರಾಮದಲ್ಲಿ ₹10 ಕೋಟಿ ವೆಚ್ಚದ ಭವನಕ್ಕೆ ಶಿಲಾನ್ಯಾಸ

ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಐತಿಹಾಸಿಕ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ–2026, ಕೇರಳ–ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ ನವೆಂಬರ್ 28 ಮತ್ತು 29ರಂದು ಕಾಸರಗೋಡಿನ ಮೀಪುಗುರಿ–ಪಾರೆಕಟ್ಟೆ–ಕನ್ನಡ ಗ್ರಾಮ ರಸ್ತೆಯಲ್ಲಿರುವ ಕನ್ನಡ ಗ್ರಾಮದಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ಅಂತರರಾಜ್ಯ ಮಟ್ಟದ ಸುಮಾರು 2,000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ರಾಜ್ಯಗಳ ಕನ್ನಡ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳಿಗೆ ಆಹ್ವಾನ ನೀಡಲಾಗುತ್ತಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದರು.

ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನದ ಸ್ವಾಗತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 36 ವರ್ಷಗಳಿಂದ ಕೇರಳ ರಾಜ್ಯದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಭಾರತದಾದ್ಯಂತ ಪರಿಚಯಿಸುವ ಉದ್ದೇಶದಿಂದ ಪ್ರತಿಷ್ಠಾನವು ಕಾರ್ಯನಿರ್ವಹಿಸುತ್ತಿದೆ. ಕೇರಳ, ಕರ್ನಾಟಕ, ಅಖಿಲ ಭಾರತ ಹಾಗೂ ಅನಿವಾಸಿ ಭಾರತೀಯ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ ಸಾಂಸ್ಕೃತಿಕ ವಿನಿಮಯಕ್ಕೆ ಈ ಸಮ್ಮೇಳನ ವೇದಿಕೆಯಾಗಲಿದೆ ಎಂದರು.

ಡಾ. ಎಂ. ವೀರಪ್ಪ ಮೊಯಿಲಿ ಅವರಿಂದ ಉದ್ಘಾಟನೆ

ಖ್ಯಾತ ಸಾಹಿತಿ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಅವರು ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ ಮತ್ತು ಕೇರಳ–ಕರ್ನಾಟಕ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಕೇರಳ ಮತ್ತು ಕರ್ನಾಟಕದ ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಹಾಗೂ ಕರ್ನಾಟಕದ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಸಂಗಮ

ಸಮ್ಮೇಳನದ ಅಂಗವಾಗಿ ಕರಕುಶಲ ವಸ್ತುಗಳ ಪ್ರದರ್ಶನ, ಚಿತ್ರಕಲಾ ಮೇಳ, ಪುಸ್ತಕ ಮೇಳ, ಆಹಾರ ಮೇಳ, ಕೃಷಿ ಮೇಳ, ಹೊಸ ಕೃತಿಗಳ ಬಿಡುಗಡೆ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಅಂತರರಾಜ್ಯ ಮಟ್ಟದ ಮಾಧ್ಯಮ ಗೋಷ್ಠಿ ಆಯೋಜಿಸಲಾಗಿದೆ. ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ ಹಾಗೂ ಮಕ್ಕಳ ಸಾಹಿತ್ಯ ಗೋಷ್ಠಿಗಳು ನಡೆಯಲಿವೆ.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಮತ್ತು ಕೇರಳ ರಾಜ್ಯ ಘಟಕದ ಆಶ್ರಯದಲ್ಲಿ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಕರ್ನಾಟಕ ಸರ್ಕಾರದ ವಿವಿಧ ಅಕಾಡೆಮಿಗಳ ಸಹಯೋಗದಲ್ಲಿ ಬಹುಭಾಷಾ ಬಾಂಧವ್ಯ ಗೋಷ್ಠಿಯೂ ನಡೆಯಲಿದೆ. ಎಂಟು ರಾಜ್ಯಗಳ ಕನ್ನಡ ಸಂಘಟನೆಗಳ ಪದಾಧಿಕಾರಿಗಳ ಭಾಗವಹಿಸುವಿಕೆಯಲ್ಲಿ ಗಡಿನಾಡು, ಹೊರನಾಡು, ಅನಿವಾಸಿ ಭಾರತೀಯ ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ

ಸಮ್ಮೇಳನದಲ್ಲಿ ಕರಾವಳಿ ರತ್ನ ಪ್ರಶಸ್ತಿ, ಕೇರಳ–ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 14 ಸಮುದಾಯಗಳ ಸಾಧಕರಿಗೆ ಸಾಧಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಕೇರಳ ಮತ್ತು ಕರ್ನಾಟಕದ ವಿವಿಧ ಕಲಾ ಪ್ರಕಾರಗಳ ಪ್ರದರ್ಶನದೊಂದಿಗೆ ಪ್ರಸಿದ್ಧ ಚಿತ್ರಕಲಾವಿದರಿಂದ ಚಿತ್ರಕಲಾ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ. ಸಮೂಹ ನೃತ್ಯ, ಜಾನಪದ ನೃತ್ಯ, ಸುಗಮ ಸಂಗೀತ, ದಾಸ ಸಂಕೀರ್ತನೆ, ಭಾವಗೀತೆ, ಚಲನಚಿತ್ರ ಗೀತಗಾಯನ ಮತ್ತು ದೇಶಭಕ್ತಿ ಗೀತೆಗಳ ಸಮೂಹ ಗಾಯನ ಕಾರ್ಯಕ್ರಮಗಳು ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಐತಿಹಾಸಿಕ, ಚಾರಿತ್ರಿಕ ಮತ್ತು ಸಾಮಾಜಿಕ ನಾಟಕಗಳ ಜೊತೆಗೆ ವಿವಿಧ ಜಾನಪದ ಕಲೆಗಳ ಪ್ರದರ್ಶನವೂ ಕನ್ನಡ ಗ್ರಾಮದಲ್ಲಿ ನಡೆಯಲಿದೆ.

₹10 ಕೋಟಿ ವೆಚ್ಚದ ಕೇರಳ–ಕರ್ನಾಟಕ ಭವನಕ್ಕೆ ಶಿಲಾನ್ಯಾಸ

ಸಮ್ಮೇಳನದ ಪ್ರಮುಖ ಕಾರ್ಯಕ್ರಮವಾಗಿ ಸುಮಾರು ₹10 ಕೋಟಿ ವೆಚ್ಚದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೇರಳ–ಕರ್ನಾಟಕ ಭವನಕ್ಕೆ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಲಾಗುವುದು. ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಶ್ರೀ ಶ್ರೀ ನಿಶ್ಚಲಾನಂದ ಮಹಾಸ್ವಾಮೀಜಿ, ಮೂಡುಬಿದಿರೆಯ ದಿಗಂಬರ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಆಗಮಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನೆರವೇರಿಸಲಿದ್ದಾರೆ.

ನಮ್ಮೂರ ಕನ್ನಡ ಜಾತ್ರೆ, ಆರೋಗ್ಯ ಶಿಬಿರ ಮತ್ತು ವಸ್ತು ಪ್ರದರ್ಶನ

ಕನ್ನಡ ಗ್ರಾಮದಲ್ಲಿ ನಮ್ಮೂರ ಕನ್ನಡ ಜಾತ್ರೆ, ವೈದ್ಯಕೀಯ ತಪಾಸಣಾ ಶಿಬಿರ, ವ್ಯಂಗ್ಯಚಿತ್ರ, ಛಾಯಾಚಿತ್ರ ಮತ್ತು ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಉದ್ಯಮ, ವ್ಯವಹಾರ, ಬ್ಯಾಂಕಿಂಗ್, ಗ್ರಾಮೀಣಾಭಿವೃದ್ಧಿ, ಖಾದಿ, ಕೃಷಿ, ಗುಡಿ ಕೈಗಾರಿಕೆ ಹಾಗೂ ಸ್ವಯಂ ಉದ್ಯೋಗ ಸಂಸ್ಥೆಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳೂ ಇರಲಿವೆ.

ಕೇರಳ, ಕರ್ನಾಟಕ ಹಾಗೂ ಭಾರತದ ವಿವಿಧ ರಾಜ್ಯಗಳಿಂದ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು, ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಕನ್ನಡಿಗರು, ಕವಿಗಳು, ಸಾಹಿತಿಗಳು, ಕಲಾವಿದರು, ಅಧ್ಯಾಪಕರು, ವಿದ್ಯಾರ್ಥಿಗಳು, ಕೃಷಿಕರು, ಉದ್ಯಮಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಗಡಿನಾಡಿನಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಮಹತ್ವದ ವೇದಿಕೆಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಶಿವರಾಮ ಕಾಸರಗೋಡು, ಅಧ್ಯಕ್ಷರು
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಪಾರೆಕಟ್ಟೆ–ಕನ್ನಡ ಗ್ರಾಮ ರಸ್ತೆ, ಕಾಸರಗೋಡು–671121.

ಮೊಬೈಲ್: 9448572016, 9901951965