ನ.28-29ರಂದು ಕಾಸರಗೋಡಿನಲ್ಲಿ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ

0
10

ಕಾಸರಗೋಡು: ಕೇರಳ ರಾಜ್ಯದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಗಡಿನಾಡಿನ ಕನ್ನಡಿಗರ ಅಸ್ಮಿತೆಯನ್ನು ಬಲಪಡಿಸುವ ಉದ್ದೇಶದಿಂದ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ–2026 ಹಾಗೂ ಕೇರಳ–ಕರ್ನಾಟಕ ಉತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನ.28 ಮತ್ತು 29ರಂದು ಕಾಸರಗೋಡಿನ ಮೀಪುಗುರಿ–ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ನಡೆಯಲಿದೆ.

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಕಳೆದ 36 ವರ್ಷಗಳಿಂದ ಕೇರಳ ರಾಜ್ಯದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಯನ್ನು ಅಂತರರಾಜ್ಯ ಮಟ್ಟದಲ್ಲಿ ಪರಿಚಯಿಸುವ ಕಾರ್ಯ ನಡೆಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಈ ಐತಿಹಾಸಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಸಮ್ಮೇಳನದ ಅಂಗವಾಗಿ ಕೇರಳ–ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯದ ಶಿಲಾನ್ಯಾಸ ನೆರವೇರಲಿದ್ದು, ಸುಮಾರು ₹25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಸರಗೋಡು ಗೋ-ಕುಟೀರ ಲೋಕಾರ್ಪಣೆಗೊಳ್ಳಲಿದೆ.

ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭ, ವಿವಿಧ ಕಲೆ, ಪುಸ್ತಕ ಹಾಗೂ ವಸ್ತು ಪ್ರದರ್ಶನ, ಹೊಸ ಕೃತಿಗಳ ಬಿಡುಗಡೆ, ಸ್ಮರಣ ಸಂಚಿಕೆ ಬಿಡುಗಡೆ, ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಬಹಿರಂಗ ಅಧಿವೇಶನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

ಇದೇ ವೇಳೆ ಬ್ಯಾಂಕಿಂಗ್, ಚಲನಚಿತ್ರ, ಕೃಷಿ, ಚಿತ್ರಕಲೆ, ಉದ್ಯಮ, ವೈದ್ಯಕೀಯ, ಯಕ್ಷಗಾನ, ಸುಗಮ ಸಂಗೀತ, ನೃತ್ಯ, ತುಳು ಭಾಷೆ, ಅನಿವಾಸಿ ಭಾರತೀಯ ಕನ್ನಡಿಗರು, ಸರ್ಕಾರಿ ಸೇವೆ, ಅಧ್ಯಾಪಕ, ಪ್ರಕಾಶನ, ಧಾರ್ಮಿಕ ಸೇವೆ, ಮುದ್ರಣೋದ್ಯಮ, ನ್ಯಾಯವಾದಿ, ಜನಪ್ರತಿನಿಧಿ ಹಾಗೂ ಸೈನಿಕ–ದೇಶ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಕೇರಳ ಮತ್ತು ಕರ್ನಾಟಕ ರಾಜ್ಯಗಳ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ, ಪ್ರಸಿದ್ಧ ಚಿತ್ರಕಲಾವಿದರಿಂದ ಚಿತ್ರಕಲಾ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ, ಸಮೂಹ ನೃತ್ಯ, ಜಾನಪದ ನೃತ್ಯ, ಸುಗಮ ಸಂಗೀತ, ದಾಸ ಸಂಕೀರ್ತನೆ, ಜಾನಪದ ಭಾವಗೀತೆ, ಚಲನಚಿತ್ರ ಗೀತೆ ಹಾಗೂ ದೇಶಭಕ್ತಿ ಗೀತೆಗಳ ಗಾಯನಕ್ಕೂ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ತಂಡಗಳು ಹಾಗೂ ಸಂಘ–ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಪರ್ಕಿಸಬಹುದಾಗಿದೆ.

ಕೇರಳ–ಕರ್ನಾಟಕ ಉತ್ಸವದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯರೂಪಕ, ಐತಿಹಾಸಿಕ, ಚಾರಿತ್ರಿಕ ಹಾಗೂ ಸಾಮಾಜಿಕ ನಾಟಕಗಳು ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದೆ. ಇದರ ಮೂಲಕ ಕೇರಳ ಮತ್ತು ಕರ್ನಾಟಕದ ಕಲೆ, ಸಂಸ್ಕೃತಿ ಹಾಗೂ ಜನಪದ ವೈವಿಧ್ಯವನ್ನು ಕಾಸರಗೋಡಿನಲ್ಲಿ ಅನಾವರಣಗೊಳಿಸುವ ಉದ್ದೇಶ ಹೊಂದಲಾಗಿದೆ.

ಕನ್ನಡ ಗ್ರಾಮದಲ್ಲಿರುವ ಸಮ್ಮೇಳನ ಸಭಾಂಗಣದ ಅಂಗಳದಲ್ಲಿ ವಸ್ತು ಪ್ರದರ್ಶನ, ಪುಸ್ತಕ ಮೇಳ, ವ್ಯಂಗ್ಯಚಿತ್ರ, ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಲಾಗುವುದು. ವಿವಿಧ ಉದ್ಯಮ, ಬ್ಯಾಂಕಿಂಗ್, ಗ್ರಾಮೀಣಾಭಿವೃದ್ಧಿ, ಖಾದಿ, ಕೃಷಿ, ಗುಡಿ ಕೈಗಾರಿಕೆ ಹಾಗೂ ಸ್ವ-ಉದ್ಯೋಗ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಿವೆ. ಆಹಾರ ಮಳಿಗೆಗಳಿಗೂ ಅವಕಾಶ ಇರಲಿದೆ.

ಗಡಿನಾಡು ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಸಾವಿರಾರು ಕನ್ನಡಿಗರು, ಕನ್ನಡಾಭಿಮಾನಿಗಳು, ವಿವಿಧ ಉಪಭಾಷೆಗಳ ಪ್ರತಿನಿಧಿಗಳು, ಸಾಂಸ್ಕೃತಿಕ ರಾಯಭಾರಿಗಳು, ಸಾಹಿತಿಗಳು, ಕಲಾವಿದರು ಹಾಗೂ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಹಲವು ಅಭಿವೃದ್ಧಿ ಯೋಜನೆಗಳಿಗೆ ಕಾರ್ಯಯೋಜನೆ

ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗಿರುವ ಗೋ-ಕುಟೀರದ ಪರಿಸರದಲ್ಲಿ ಮುಂದಿನ ದಿನಗಳಲ್ಲಿ ‘ಕಾಸರಗೋಡು ಕೃಷಿ ಕುಟೀರ’ ನಿರ್ಮಿಸುವ ಕಾರ್ಯಯೋಜನೆ ರೂಪಿಸಲಾಗಿದೆ. ವಿವಿಧ ಸಂಘ–ಸಂಸ್ಥೆಗಳು, ಬ್ಯಾಂಕ್‌ಗಳು, ಉದ್ಯಮ–ಕೈಗಾರಿಕಾ ಸಂಸ್ಥೆಗಳು, ದೇವಸ್ಥಾನ, ಮಠ, ಮಂದಿರ ಹಾಗೂ ಟ್ರಸ್ಟ್‌ಗಳ ನೆರವು ಮತ್ತು ಪ್ರಾಯೋಜಕತ್ವದಲ್ಲಿ ಸಾವಯವ ಕೃಷಿ ಸೇರಿದಂತೆ ಹಲವು ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಗ್ರಾಮೀಣ ವಿದ್ಯಾರ್ಥಿಗಳು, ಯುವಜನರು ಹಾಗೂ ಮಹಿಳೆಯರಿಗಾಗಿ ಹೊಲಿಗೆ, ವಸ್ತ್ರ ವಿನ್ಯಾಸ, ಡಿಸೈನಿಂಗ್, ಕಂಪ್ಯೂಟರ್ ಮತ್ತು ಡಿಜಿಟಲ್ ಮಾಧ್ಯಮ ತರಬೇತಿ, ಎ.ಐ. ಅಕ್ಷರ ಕುಟೀರ, ಗ್ರಾಮೀಣ ಜಾನಪದ ವಸ್ತು ಸಂಗ್ರಹಾಲಯ, ಕಾಸರಗೋಡು ಕನ್ನಡ ಪತ್ರಿಕಾ ಮ್ಯೂಸಿಯಂ, ಹಿರಿಯ ನಾಗರಿಕರಿಗಾಗಿ ಗ್ರಾಮೀಣ ವೈದ್ಯಕೀಯ ಕ್ಲಿನಿಕ್, ಗ್ರಂಥಾಲಯ, ಸಾಹಿತ್ಯ ಕುಟೀರ ಹಾಗೂ ಭಜನಾ–ಸಂಕೀರ್ತನಾ ಕುಟೀರ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ.

ಕಾಸರಗೋಡು ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳಿಗೆ ರಜಾ ದಿನಗಳಲ್ಲಿ ಗುರುಕುಲ ಮಾದರಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಜಾನಪದ, ಇತಿಹಾಸ, ರಂಗಭೂಮಿ, ಯಕ್ಷಗಾನ ಹಾಗೂ ಪ್ರಾದೇಶಿಕ ಜಾನಪದ ಕಲಾ ವೈವಿಧ್ಯದ ಕುರಿತು ತರಬೇತಿ ನೀಡಲು ‘ಕಾಸರಗೋಡು ಸಂಸ್ಕೃತಿ ಕುಟೀರ’ ಸ್ಥಾಪಿಸುವ ಉದ್ದೇಶವೂ ಇದೆ. ಇದರೊಂದಿಗೆ ‘ನಮ್ಮ ಮನೆ–ವಿಶ್ರಾಂತಿ ಗೃಹ’ ನಿರ್ಮಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಸಮ್ಮೇಳನದ ಪೂರ್ವಭಾವಿಯಾಗಿ ದೇಶ–ವಿದೇಶಗಳಲ್ಲಿ ವಿವಿಧ ಸಂಘ–ಸಂಸ್ಥೆಗಳ ಸಹಯೋಗದೊಂದಿಗೆ ಸಾಂಸ್ಕೃತಿಕ ರಾಯಭಾರಿಗಳ ದುಂಡು ಮೇಜಿನ ಪರಿಷತ್ತು ಹಾಗೂ ಚಿಂತನಾ ಸಭೆಗಳನ್ನು ನಡೆಸಿ, ‘ಕಾಸರಗೋಡು ಕನ್ನಡ ಸಾಂಸ್ಕೃತಿಕ ರಾಯಭಾರಿಗಳ ಕನ್ನಡ ಯಾತ್ರೆ’ ಮೂಲಕ ಸಮ್ಮೇಳನಕ್ಕೆ ವ್ಯಾಪಕ ಪ್ರಚಾರ ನೀಡಲು ಉದ್ದೇಶಿಸಲಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.