ಉಡುಪಿ ಜಿಲ್ಲೆಯ ಉಪ್ಪುರು ಗ್ರಾಮದ ವ್ಯಾಪ್ತಿಯ ಕೊಳಲಗಿರಿ ಜಂಕ್ಷನ್ ಬಳಿ ನಡೆಯುವ ವಾರದ ಸಂತೆ ಮಾರ್ಕೆಟ್ ಮೂಲಸೌಕರ್ಯದ ಕೊರತೆಯಿಂದ ಸಂಕಷ್ಟದಲ್ಲಿದೆ. ಪ್ರತೀ ಮಂಗಳವಾರ ನಡೆಯುವ ಈ ಸಂತೆಗೆ ಉಪ್ಪುರು, ಆರೂರು, ಹಾವಂಜೆ ಹಾಗೂ ಕುಕ್ಕೆಹಳ್ಳಿ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಸೇರಿ ಸುಮಾರು ಸಾವಿರಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದು, ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಹಾಗೂ ಅಪಘಾತಗಳ ಭೀತಿ ಹೆಚ್ಚಾಗಿದೆ.

ಮಣಿಪಾಲ, ಪೆರ್ಡೂರು, ಕೆಜಿ ರೋಡ್, ಆರೂರು ಹಾಗೂ ಬ್ರಹ್ಮವರ ಭಾಗಗಳಿಂದ ಬರುವ ಎಲ್ಲಾ ವಾಹನಗಳು ಇದೇ ಜಂಕ್ಷನ್‌ನಲ್ಲಿ ಸೇರುವುದರಿಂದ ಇದು ಪ್ರಮುಖ ಸಂಪರ್ಕ ಕೇಂದ್ರವಾಗಿದ್ದು, ವಾಹನಗಳು ಎದುರುಬೆದು ಆಗಿ ಬ್ಲಾಕ್ ಆಗುವುದು ಸಾಮಾನ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಸಂತೆ ಮಾರ್ಕೆಟ್‌ನಲ್ಲಿ ಶೌಚಾಲಯ, ಸಿಸಿ ಕ್ಯಾಮೆರಾ, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವ್ಯಾಪಾರಿಗಳು, ವಿಶೇಷವಾಗಿ ಮಹಿಳಾ ವ್ಯಾಪಾರಿಗಳು, ಬಹಳಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಶೀಟ್ ವ್ಯವಸ್ಥೆ ಇಲ್ಲದಿರುವುದರಿಂದ ವ್ಯಾಪಾರ ನಡೆಸುವುದು ಕಷ್ಟಕರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂತೆ ಮಾರ್ಕೆಟ್ ಉಡುಪಿ ಜಿಲ್ಲಾ ಎಪಿಎಂಸಿ ಅಧೀನದಲ್ಲಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸಾರ್ವಜನಿಕರು ಹಾಗೂ ರೈತರ ಪರವಾಗಿ ಸಮಾಜ ಸೇವಕ ಸತೀಶ್ ಪೂಜಾರಿ ಕೀಳಂಜಿ ಆಗ್ರಹಿಸಿದ್ದಾರೆ.
ಇದೇ ವೇಳೆ, ಕೊಳಲಗಿರಿ ಜಂಕ್ಷನ್‌ನಲ್ಲಿ ಶಾಶ್ವತ ಸರ್ಕಲ್ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದು, ಇದನ್ನು ಕೂಡಲೇ ಈಡೇರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಜಂಕ್ಷನ್ ಪ್ರದೇಶದಲ್ಲಿ ಅಲೆಮಾರಿ ನಾಯಿಗಳ ಹಾವಳಿ ಹೆಚ್ಚಿದ್ದು, ಸಂತೆಗೆ ಬರುವ ಜನರು ಹಾಗೂ ಬಸ್ ಕಾಯುವ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಆತಂಕದಲ್ಲಿ ಸಂಚರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಟ್ರಾಫಿಕ್ ನಿಯಂತ್ರಣ ಕ್ರಮಗಳು ಹಾಗೂ ಕೊಳಲಗಿರಿ ಸರ್ಕಲ್ ನಿರ್ಮಾಣ ಮಾಡಬೇಕೆಂದು ಹಾವಂಜೆ ಗ್ರಾಮದ ಯುವ ರೈತ ಉಮೇಶ್ ಶೆಟ್ಟಿ ನಡುಮನೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ಕೊಳಲಗಿರಿ ಸಂತೆ ಮಾರ್ಕೆಟ್ ವ್ಯಾಪಾರಸ್ಥರಾದ ಗಣೇಶ ಬಾಗಲಕೋಟೆ ಅವರು ಮಾತನಾಡಿ, “ನಾವು ಸಂತೆಯಲ್ಲಿ ವ್ಯಾಪಾರ ಮಾಡಲು ಪಂಚಾಯಿತಿಗೆ ಸುಂಕ ಪಾವತಿಸುತ್ತೇವೆ. ಆದರೆ ಶೌಚಾಲಯ, ವಿದ್ಯುತ್, ನೀರಿನ ವ್ಯವಸ್ಥೆ ಇಲ್ಲದೆ, ವಿಶೇಷವಾಗಿ ಮಹಿಳೆಯರಿಗೆ ತೊಂದರೆ ಆಗುತ್ತಿದೆ. ಮಳೆಗಾಲದಲ್ಲಿ ಶೀಟ್ ವ್ಯವಸ್ಥೆ ಇಲ್ಲದಿರುವುದರಿಂದ ವ್ಯಾಪಾರ ನಡೆಸಲು ಕಷ್ಟವಾಗುತ್ತದೆ. ಆದಷ್ಟು ಬೇಗ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು” ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ, ಕೊಳಲಗಿರಿ ಜಂಕ್ಷನ್ ಮತ್ತು ಸಂತೆ ಮಾರ್ಕೆಟ್ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸುರಕ್ಷತಾ ಕ್ರಮಗಳನ್ನು ತಕ್ಷಣ ಜಾರಿಗೊಳಿಸುವಂತೆ ಸಾರ್ವಜನಿಕರು, ರೈತರು ಮತ್ತು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

