ಬಾಳೆಹೊಳೆ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊಳೆ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ಕೆ. ಎನ್. ಭಟ್ ಶಿರಾಡಿಪಾಲ್ ಮತ್ತು ಬಲಿಪ ಪ್ರಸಾದ ಭಾಗವತರ ಸಂಸ್ಮರಣೆ ಕಾರ್ಯಕ್ರಮವು ಜು. 28ರಂದು ಅಪರಾಹ್ನ ಜರಗಿತು.
ಯಕ್ಷಗಾನ ಕಲಾವಿದ ಮತ್ತು ಉಪನ್ಯಾಸಕ ರಜನೀಶ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ. ಎನ್. ಭಟ್ ಶಿರಾಡಿಪಾಲರ ಸ್ಮರಣೆಯ ಶತಮಾನೋತ್ತರ ಸನ್ಮಾನ ಹಾಗೂ ಬಲಿಪ ಪ್ರಸಾದ ಭಾಗವತರ 50ರ ನೆನಪು “ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್” ಸರಣಿಯ 13ನೇ ಸನ್ಮಾನಗಳನ್ನು ವಿಶ್ರಾಂತ ಮುಖ್ಯೋಪಾಧ್ಯಾಯ, ಹವ್ಯಾಸಿ ಯಕ್ಷಗಾನ ಕಲಾವಿದ, ಯಕ್ಷಗುರು ಕೆ. ಅನಂತ ಪದ್ಮಾನಾಭ ಹೊಳ್ಳರಿಗೆ ನೀಡಿ ಗೌರವಿಸಲಾಯಿತು.

ಈ ಅವಳಿ ಸನ್ಮಾನಗಳನ್ನು ಸ್ವೀಕರಿಸಿದ ಅನಂತ ಪದ್ಮನಾಭ ಹೊಳ್ಳರು ಶಿರಾಡಿಪಾಲ್ ಕುಟುಂಬದ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರಲ್ಲದೆ ಮತ್ತು ಯುವಾವಸ್ಥೆಯಲ್ಲಿಯೇ ಅಗಲಿರುವ ಬಲಿಪ ಪ್ರಸಾದ ಭಾಗವತರ ಸಾಧನೆ ಯುವ ಪೀಳಿಗೆಯ ಕಲಾವಿದರಿಗೆ ಸ್ಪೂರ್ತಿದಾಯಕವಾಗಿದೆ ಎಂದರು. ಯಕ್ಷಸಂಗಮ ಮೂಡುಬಿದಿರೆಯ ಅಧ್ಯಕ್ಷ ಎಂ. ಶಾಂತರಾಮ ಕುಡ್ವರು ಬಲಿಪ ಪ್ರಸಾದ ಭಾಗವತರನ್ನು ನೆನಪಿಸಿಕೊಳ್ಳುತ್ತಾ ಕಪ್ಪು ಮೂರು ಮತ್ತು ಬಿಳಿ ನಾಲ್ಕರ ಏರುಶ್ರುತಿಯಲ್ಲಿ ಹಾಡುತ್ತಿದ್ದ ಅವರ ಕಂಠಸಿರಿ ಅವರ ಅಭಿಮಾನಿಗಳ ಹೃದಯಗಳಲ್ಲಿ ಇಂದಿಗೂ ಅನುರಣಿಸುತ್ತಿದೆ ಎಂದರು.
ಕೆ. ಎನ್. ಭಟ್ ಶಿರಾಡಿಪಾಲರ ಅಳಿಯ ಜಿ.ವಿ. ಗಜೇಂದ್ರ ಗೊರಸುಕುಡಿಗೆಯವರು ಶಿರಾಡಿಪಾಲರ ಬಹುವಿಧ ಸಾಧನೆಗಳನ್ನು ವಿವರಿಸಿದರು. ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್ ಸರಣಿ ಕಾರ್ಯಕ್ರಮದ ಗೌರವ ಸಲಹೆಗಾರ ರುಕ್ಕಯ್ಯ ಪೂಜಾರಿ ಅಳಿಯೂರು, ರೈತ ಮುಖಂಡ ಆಲ್ವಿನ್ ಮಿನೇಜಸ್ ಗಂಟಾಲ್ಕಟ್ಟೆ, ಸನ್ಮಾನಿತ ಅನಂತ ಪದ್ಮನಾಭ ಹೊಳ್ಳರ ಶಿಷ್ಯ, ನಿವೃತ್ತ ಪೊಲೀಸ್ ಅಧಿಕಾರಿ ವಾಸು ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿರಾಡಿಪಾಲರ ಪುತ್ರಿ ನಿವೇದಿತಾ ಗಜೇಂದ್ರ ಅತಿಥಿಗಳನ್ನು ಗೌರವಿಸಿದರು. ಸನ್ಮಾನಿತರ ಪುತ್ರಿ ಶ್ರೀಮತಿ ಸವಿತಾ, ಅಳಿಯ ಗುರುರಾಜ ಪಟೇಲ್ ಉಪಸ್ಥಿತರಿದ್ದರು. ಆಲ್ವಿನ್ ಮಿನೇಜಸ್ ಸನ್ಮಾನಪತ್ರ ವಾಚಿಸಿದರು. ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಸನ್ಮಾನಿತರನ್ನು ಪರಿಚಯಿಸಿದರು. ಜಿ.ವಿ. ಗಜೇಂದ್ರ ಸ್ವಾಗತಿಸಿ ನಿರೂಪಿಸಿದರು.

