ಉಡುಪಿ : ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯವರು ನನ್ನ ಮೇಲೆ ಮಾಡಿರುವ ಹನಿ ಟ್ರ್ಯಾಪ್ ಆರೋಪ ಸಂಪೂರ್ಣ ಸುಳ್ಳು ಎಂದು ಪತ್ನಿ ಸೌಮ್ಯ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದೀಪ್ ಅವರು ತಮ್ಮ ತಂದೆಯ ಮನೆಗೆ ತೆರಳಿದ್ದ ಸಮಯದಲ್ಲೇ ಏನೋ ದುರ್ಘಟನೆ ಸಂಭವಿಸಿದೆ. ಸುದೀಪ್ ರೈ ಮನೆಯವರ ಮೇಲೆ ಸಂಶಯವಿದೆ. ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಸುದೀಪ್ ರೈ ಆಸ್ಪತ್ರೆಯಲ್ಲೇ ಪೊಲೀಸರ ಮುಂದೆಯೇ ‘ವೈಯಕ್ತಿಕ ಕಾರಣದಿಂದ ನಾನೇ ಸ್ವ ಇಚ್ಛೆಯಿಂದ ವಿಷ ತೆಗೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ಆದರೆ ಸುದೀಪ್ ರೈ ತಂದೆ ಮತ್ತು ವೇಣುಗೋಪಾಲ ಶೆಟ್ಟಿ ನನ್ನ ಮೇಲೆ ಮಾಡುತ್ತಿರುವ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಹಾನಿ ಮಾಡುವ ಹುನ್ನಾರ ಎಂದರು.
ಸುದೀಪ್ ರೈ ನಮ್ಮ ಮದುವೆ ವಿಚಾರದ ಕುರಿತು ಮಾತನಾಡಲು ಅವರ ಮನೆಗೆ ತೆರಳಿದ್ದರು. ಆದರೆ ಅಲ್ಲಿ ಹೋದ ಬಳಿಕ ಅವರ ಮೊಬೈಲ್ ಸ್ವೀಚ್ ಆಫ್ ಆಗಿತ್ತು. ಎಷ್ಟೇ ಕರೆ ಮಾಡಿದರು ಕರೆ ಸ್ವೀಕರಿಸುತ್ತಿರಲಿಲ್ಲ. ಬಳಿಕ ಮತ್ತೆ ಕರೆ ಮಾಡಿದಾಗ ನಾನು ಸಮಸ್ಯೆ ಅಲ್ಲಿ ಇದ್ದೇನೆ. ನಾನು ಅಲ್ಲಿಗೆ ಬಂದು ಹೇಳುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದರು. ಇವರು ಏನೂ ಸಮಸ್ಯೆಯಲ್ಲಿ ಇದ್ದಾರೆ ಎಂದು ತಿಳಿದು ನಾನು ಅವರ ಮನೆಗೆ ತೆರಳಿದೆ. ನಾನು ಬರುವುದನ್ನು ನೋಡಿದ ಸುದೀಪ್ ಅವರು ರಸ್ತೆ ಮಧ್ಯೆ ನಿಲ್ಲಿಸಿದರು. ಅವರ ತಾಯಿ ನೀನು ನನಗೆ ಇಷ್ಟ ಇಲ್ಲ, ನೀನು ನನ್ನ ಮಗನಿಗೆ ವಿಚ್ಛೇದನ ಕೊಡಬೇಕು ಹೇಳಿದರು. ಇದಕ್ಕೆ ನಾನು ಮದುವೆ ನೋಂದಣಿ ಆಗಿದೆ. ಇಬ್ಬರು ಒಟ್ಟಿಗೆ ಇದ್ದೇವೆ ಎಂದು ಹೇಳಿದೆ. ಅದಕ್ಕೆ ತುಂಬಾ ಕೆಟ್ಟ ಪದಗಳಿಂದ ಬೈದರು. ನಾನು ಅಲ್ಲೇ ಕೂಗಿದೆ. ಅಲ್ಲಿ ಯಾವುದೇ ಜಗಳ ಆಗಿಲ್ಲ. ನಾನು ಯಾರನ್ನು ತಳ್ಳಾಟ ನಡೆಸಿಲ್ಲ. ಅಲ್ಲಿರುವ ಸಿಸಿಟಿವಿಯಲ್ಲಿ ಬೇಕಾದರೆ ಪರೀಕ್ಷಿಸಿಕೊಳ್ಳಬಹುದು. ಈ ಬಗ್ಗೆ ಸುಖಾಸುಮ್ಮನೆ ನನ್ನ ಮೇಲೆ ಆರೋಪ ಹೊರೆಸುತ್ತಿದ್ದಾರೆ ಎಂದು ದೂರಿದರು.
ಸುದೀಪ್ ನೆಲ್ಯಾಡಿಯಲ್ಲಿ ಅವರ ಮನೆಗೆ ಹೋಗಿ ಬಂದ ಬಳಿಕ ತುಂಬಾ ಬಳಲಿದ್ದರು. ಅಲ್ಲಿ ಏನೂ ವಿಷಯ ಆಗಿದ ಅಂತಾ ನನಗೆ ಗೊತ್ತಿಲ್ಲ. ಅಲ್ಲಿ ನಡೆದ ಕಾರಣದಿಂದಲೇ ಅವರು ವಿಷ ಸೇವಿಸಿರಬಹುದು. ಅವರ ಮನೆಯವರ ಮೇಲೆ ಸಂಶಯವಿದೆ. ಹೀಗಾಗಿ ಈ ಬಗ್ಗೆ ದೂರು ದಾಖಲಿಸುತ್ತೇನೆ ಎಂದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಸಂಪೂರ್ಣ ವಿಷಯವನ್ನು ವಿವರಿಸಿ, ನ್ಯಾಯಯುತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು. ನನಗೆ ನ್ಯಾಯ ದೊರಕಬೇಕು ಎಂದು ಸೌಮ್ಯ ಶೆಟ್ಟಿ ಒತ್ತಾಯಿಸಿದ್ದಾರೆ.

