ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಯಕ್ಷ ದೇವ ಮಿತ್ರಕಲಾ ಮಂಡಳಿ ಬೆಳುವಾಯಿ, ಮೂಡುಬಿದಿರೆ ಮಹಾವೀರ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 2ರಂದು ಮಹಾವೀರ ಕಾಲೇಜಿನಲ್ಲಿ ಮಿಜಾರು ಅಣ್ಣಪ್ಪ ಸಂಸ್ಮರಣೆ ಹಾಗೂ ಪ್ರಸಿದ್ಧ ಕಲಾವಿದರ ಕೋಟಿ ಚೆನ್ನಯ ಯಕ್ಷಗಾನ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಉದ್ಯಮಿ ಶ್ರೀಪತಿ ಭಟ್ ಸನಾತನ ಧರ್ಮದ ತಿಳುವಳಿಕೆಯನ್ನು ಮಕ್ಕಳಿಗೆ ಮಾಡಿಕೊಟ್ಟು ವಿಚಾರ ಮಾಡಲು ಪ್ರಚೋದನೆಯನ್ನು ಕೊಡುವ ಯಕ್ಷಗಾನ, ಸಶಕ್ತ ಮಾಧ್ಯಮವಾಗಿದೆ. ಸ್ವಯಂ ನಗುವಿಗೆ ಕಾರಣಕರ್ತರಾಗಿದ್ದ ವಿಚಾರ ಅಣ್ಣಪ್ಪರಂತಹ ವ್ಯಕ್ತಿಗಳು ತುಳು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದ್ದರು ಎಂದು ಸ್ಮರಿಸಿಕೊಂಡರು.

ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಣ್ಣಪ್ಪ ರಿಂದಾಗಿ ಮಿಜಾರಿಗೆ ಹಾಗೂ ತುಳುವಿಗೆ ಹೆಮ್ಮೆ ಬರಲು ಸಾಧ್ಯವಾಗಿದೆ. ಭಾಷೆ ಉಳಿಸುವ ಕೆಲಸ ಕಲಾವಿದರುಗಳಿಂದ ಮಾತ್ರ ಸಾಧ್ಯ. ನಾಟಕ ಹಾಗೂ ಯಕ್ಷಗಾನ ಕಲಾವಿದರಿಗೆ ನಾವು ಭಾಷೆಯ ವಿಚಾರದಲ್ಲಿ ಸದಾ ಋಣಿಯಾಗಿರಬೇಕು. ಉತ್ತಮ ಮಟ್ಟದ ಹಾಸ್ಯವನ್ನು ನಡೆಸಿಕೊಟ್ಟ ಅವರೆಲ್ಲರನ್ನು ಸದಾ ಸ್ಮರಿಸಬೇಕು. ಯಕ್ಷಗಾನ ಪಕ್ಷಗಾನ ಆಗದೇ ಇರಲಿ ಎಂದು ಆಶಯ ವ್ಯಕ್ತಪಡಿಸಿ ಕಲೆಯು ಕಲೆಯ ರೂಪದಲ್ಲಿಯೇ ಬೆಳೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಭಯ ಚಂದ್ರ ಜೈನ್, ಪ್ರಾಂಶುಪಾಲ ಡಾ. ರಾಧಾಕೃಷ್ಣ, ಸದಾಶಿವ ಮಿಜಾರು, ತುಳು ಸಂಘದ ಸಂಚಾಲಕ ಪ್ರವೀಣ್ ಭಂಡಾರಿ, ಅಕಾಡೆಮಿಯ ಬಾಬು ಕೊರಗ ಪಾಂಗಾಳ, ಹಾಜರಿದ್ದರು.
ಯಕ್ಷ ದೇವ ಮಿತ್ರಕಲಾ ಮಂಡಳಿಯ ಅಧ್ಯಕ್ಷ ದೇವಾನಂದ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ತುಳು ಸಂಘದ ಮಂದಾರ ವಂದಿಸಿದರು.

