ಮಂಗಳೂರು : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಾಯೋಜಕತ್ವದಲ್ಲಿ ತುಳುಕೂಟ ಕುಡ್ಲ ವತಿಯಿಂದ ಅಪ್ರಕಟಿತ ಸ್ವತಂತ್ರ ನಾಟಕ ಕೃತಿಗಳಿಗೆ ನೀಡುವ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ರಾಜೇಶ್ ಶೆಟ್ಟಿ ದೋಟ ಅವರ ‘ಒಂಜಿ ಗುತ್ತುದ ಕತೆ’ ಮೊದಲ ಬಹುಮಾನದೊಂದಿಗೆ ಆಯ್ಕೆಯಾಗಿದೆ ಎಂದು ತುಳುಕೂಟ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಮತ್ತು ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ತಿಳಿಸಿದ್ದಾರೆ.
ವಿಲಾಸ್ ಕುಮಾರ್ ನಿಟ್ಟೆ(ಆಯೆ ಆಣ್ ಮಗೆ) ದ್ವಿತೀಯ ಹಾಗೂ ರಮ್ಯಾ ಬಿ.ಸಿ.ರೋಡ್(ಭಕ್ತೆ ಪ್ರಹ್ಲಾದೆ) ತೃತೀಯ ಬಹುಮಾನ ಗಳಿಸಿದ್ದಾರೆ. ಪ್ರಶಸ್ತಿ ಪ್ರಥಮ 10 ಸಾವಿರ ರೂ., ದ್ವಿತೀಯ 8 ಸಾವಿರ ರೂ., ತೃತೀಯ 6 ಸಾವಿರ ರೂ. ಹಾಗೂ ಗೌರವ ಸ್ಮರಣಿಕೆ ಒಳಗೊಂಡಿದೆ.
ಏ.14ರಂದು ಸಂಜೆ 4.30ಕ್ಕೆ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಬಿಸು ಪರ್ಬದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸ್ಥಾಪಕ, ನಿರ್ದೇಶಕ ಡಾ.ತುಕಾರಾಂ ಪೂಜಾರಿ ಹಾಗೂ ನಾಟಕಕಾರ, ನಿರೂಪಕ ಕದ್ರಿ ನವನೀತ ಶೆಟ್ಟಿ ತೀರ್ಪುಗಾರರಾಗಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

