ಯಕ್ಷಗಾನ ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರವಿರಲಿ: ಪ್ರವೀಣ್ ಬಿ. ಶೆಟ್ಟಿ
ಮುಂಬಯಿ : ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ರಜತ ಪರ್ವದ ಅಂಗವಾಗಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಎರಡು ದಿನಗಳ ಮುಂಬಯಿ ಯಕ್ಷಗಾನ ಸಮ್ಮೇಳನ-2026 ಇದರ ಸಮಾಲೋಚನಾ ಸಭೆಯು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಎ. 6ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಮ್ಮೇಳನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ಪ್ರವೀಣ್ ಭೋಜ ಶೆಟ್ಟಿಯವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು.
ವಿಜ್ಞಾಪನಾ ಪತ್ರ ಬಿಡುಗಡೆ:
ಸಭೆಯಲ್ಲಿ ಮುಂಬಯಿ ಯಕ್ಷಗಾನ ಸಮ್ಮೇಳನದ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರವೀಣ್ ಬಿ.ಶೆಟ್ಟಿ ಅವರು ‘ಒಂದು ಕಲಾ ಸಂಘಟನೆ ಮರಾಠಿ ಮಣ್ಣಿನಲ್ಲಿ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವುದೆಂದರೆ ಸಾಮಾನ್ಯ ವಿಷಯವಲ್ಲ ; ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಕಳೆದ 25 ವರ್ಷಗಳಿಂದ ಊರಿನ ಕಲಾವಿದರನ್ನು ಆಹ್ವಾನಿಸಿ ಮಹಾನಗರದಲ್ಲಿ ಸರಣಿ ಯಕ್ಷಗಾನ ತಾಳಮದ್ದಳೆ ಕೂಟ ಮತ್ತು ಯಕ್ಷಗಾನ ಬಯಲಾಟ ಪ್ರದರ್ಶನಗಳನ್ನು ನಿರಂತರವಾಗಿ ಆಯೋಜಿಸುತ್ತ ಬಂದ ವರು. ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡು ವುದರೊಂದಿಗೆ, ಸಾಧಕ ಕಲಾವಿದರನ್ನು ಗುರುತಿಸಿ ಅವರಿಗೆ ‘ಯಕ್ಷಾರಕ್ಷಾ ಪ್ರಶಸ್ತಿ’ ಯನ್ನು ಪ್ರದಾನಿಸುತ್ತಿದ್ದಾರೆ.
ಈ ವರ್ಷ ಎರಡು ದಿನಗಳ ಕಾಲ ಯಕ್ಷಗಾನ ಸಮ್ಮೇಳನವನ್ನು ಬಂಟರ ಭವನದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನವು ಅರ್ಥಪೂರ್ಣವಾಗಿ ನಡೆದು ಇತಿಹಾಸ ನಿರ್ಮಾಣವಾಗುವಲ್ಲಿ ಮುಂಬಯಿ ದಾನಿಗಳು, ಕಲಾಭಿಮಾನಿಗಳು, ಕಲಾಪೋಷಕರು, ವಿವಿಧ ಸಂಘಟನೆಗಳು ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಸಹಕಾರ ನೀಡುವಂತಾಗಲಿ’ ಎಂದ ಅವರು ‘ಯಕ್ಷಗುರುವಾಗಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸಾವಿರಾರು ಕಲಾವಿದರನ್ನು ಇಲ್ಲಿ ಸೃಷ್ಟಿಸಿದ್ದಾರೆ. ತ್ರಿರಂಗ ಸಂಗಮದ ಅಶೋಕ್ ಪಕ್ಕಳರಂತಹ ಕಲಾ ಸಂಘಟಕರು ಸಮ್ಮೇಳನದ ಯಶಸ್ಸಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಎಲ್ಲರ ಸಹಕಾರದೊಂದಿಗೆ ಸಮ್ಮೇಳನ ಯಶಸ್ವಿಯಾಗಿ ನೆರವೇರಲಿ’ ಎಂದು ಶುಭ ಹಾರೈಸಿದರು.
ಸಾರ್ಥಕತೆಯ ಬೆಳ್ಳಿಹಬ್ಬ:
ಕಲಾ ಸಂಘಟಕ, ತ್ರಿರಂಗ ಸಂಗಮದ ರೂವಾರಿಗಳಲ್ಲೊಬ್ಬರಾದ ಕರ್ನೂರು ಮೋಹನ್ ರೈ ಅವರು ಮಾತನಾಡಿ, ‘ಅಜೆಕಾರು ಕಲಾಭಿಮಾನಿ ಬಳಗವು ಕಳೆದ ಎರಡೂವರೆ ದಶಕಗಳಿಂದ ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ಕಲೆ-ಕಲಾವಿದರನ್ನು ಬೆಳೆಸುವ ಮಹತ್ತರವಾದ ಕೆಲಸ ಮಾಡುತ್ತಿದೆ. ಅದರ ಸಾರ್ಥಕತೆಯ ಸಂಕೇತವಾಗಿ ಬಳಗವು ತನ್ನ ಬೆಳ್ಳಿಹಬ್ಬದ ನಿಮಿತ್ತ ಯಕ್ಷಗಾನ ಸಮ್ಮೇಳನವನ್ನು ಆಯೋಜಿಸಿರುವುದು ಅಭಿಮಾನದ ವಿಷಯವಾಗಿದೆ. ಯೋಜನೆಯ ಯಶಸ್ಸಿನಲ್ಲಿ ನಾವೆಲ್ಲರೂ ಭಾಗಿಯಾಗೋಣ’ ಎಂದರು.
ಬಾಂಬೆ ಬಂಟ್ಸ್ ಅಸೋಸಿಯೇಶನ್ ನಿಕಟಪೂರ್ವ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಮಾತನಾಡಿ ‘ಎರಡು ದಿನಗಳ ಯಕ್ಷಗಾನ ಸಮ್ಮೇಳನ ಎನ್ನುವುದು ಸಾಮಾನ್ಯ ಮಾತಲ್ಲ. ಕಲೆ-ಕಲಾವಿದರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಬಳಗಕ್ಕೆ ನನ್ನ ಸಹಕಾರ ಸದಾ ಇದೆ. ಬಂಟರ ಭವನದಲ್ಲಿ ನಡೆಯಲಿರುವ ಅದ್ದೂರಿ ಸಮ್ಮೇಳನವನ್ನು ನಾವೆಲ್ಲರೂ ಒಂದಾಗಿ ಸೇರಿ ಯಶಸ್ವಿಗೊಳಿಸೋಣ ‘ ಎಂದರು.
ಸ್ವಾಗತ ಸಮಿತಿ ಮತ್ತು ಗೋಷ್ಠಿಗಳು:
ಕಾರ್ಯಕ್ರಮದ ರೂಪುರೇಷೆ ಬಗ್ಗೆ ತಿಳಿಸಿದ ಕಲಾಭಿಮಾನಿ ಬಳಗದ ಸಂಸ್ಥಾಪಕಾಧ್ಯಕ್ಷ, ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ‘ಅಕ್ಟೋಬರ್ ನಲ್ಲಿ ನಡೆಯುವ ಎರಡು ದಿನಗಳ ಸಮ್ಮೇಳನದ ವ್ಯವಸ್ಥಾಪನಾ ಸಮಿತಿಯ ಸರ್ವಾಧ್ಯಕ್ಷರಾಗಿ ಬಂಟರ ‘ಸಂಘದ ಅಧ್ಯಕ್ಷ ಪ್ರವೀಣ್ ಬಿ. ಶೆಟ್ಟಿಯವವರು ಆಯ್ಕೆಯಾಗಿರುವುದು ಅಭಿಮಾನದ ವಿಷಯ. ಹಾಗೆಯೇ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡು ಅವರ ಮಾರ್ಗದರ್ಶನ, ಸಲಹೆ-ಸೂಚನೆಗಳೊಂದಿಗೆ ಪೂರ್ಣ ಪ್ರಮಾಣದ ಸಮ್ಮೇಳನ ಸ್ವಾಗತ ಸಮಿತಿ ಮತ್ತು ಉಪ ಸಮಿತಿಗಳನ್ನು ರಚಿಸಲಾಗುವುದು’ ಎಂದರು.
ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ಶ್ರೇಷ್ಠ ವ್ಯಕ್ತಿಯೊಬ್ಬರನ್ನು ಶೀಘ್ರದಲ್ಲೇ ಸಮ್ಮೇಳನಾಧ್ಯಕ್ಷರನ್ನಾಗಿ ನಿಯೋಜಿಸಲಾಗುವುದು. ಅಲ್ಲದೆ ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಶಿ ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ನೇತೃತ್ವದ ಕಾರ್ಯಕ್ರಮ ಸಮಿತಿಯು ಸಮ್ಮೇಳನದ ವಿವಿಧ ಗೋಷ್ಠಿಗಳು ಮತ್ತಿತರ ಕಲಾಪಗಳ ರೂಪುರೇಷೆಗಳನ್ನು ಮಾಡುತ್ತಿದ್ದಾರೆ . ಮುಖ್ಯವಾಗಿ ಕಲಾಭಿಮಾನಿಗಳು, ಕಲಾಪೋಷಕರು, ದಾನಿಗಳ ಸಹಕಾರ ಅಗತ್ಯವಾಗಿದ್ದು, ಎಲ್ಲರೂ ಒಂದಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿದೆ’ ಎಂದವರು ಸರ್ವರ ಸಹಕಾರ ಕೋರಿದರು.
ಕಾರ್ಯಕ್ರಮದಲ್ಲಿ ತ್ರಿರಂಗ ಸಂಗಮದ ಇನ್ನೋರ್ವ ರೂವಾರಿ ಹಾಗೂ ಕನ್ನಡ ವೆಲ್ಫೇರ್ ಸೊಸೈಟಿ ಫಾಟ್ ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ, ಘಾಟ್ ಕೋಪರ್ ಅಸಲ್ಪಾದ ಗೀತಾಂಬಿಕಾ ಯಕ್ಷಗಾನ ಮಂಡಳಿ ಅಧ್ಯಕ್ಷ ಸತೀಶ್ ಶೆಟ್ಟಿ ಕೊಟ್ರಪಾಡಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಪದಾಧಿಕಾರಿ ಚಂದ್ರಹಾಸ್ ಶೆಟ್ಟಿ ದೆಪ್ಪುಣಿಗುತ್ತು, ಯಕ್ಷಗಾನ ಮದ್ದಳೆವಾದಕ ಆನಂದ ಕೆ.ಶೆಟ್ಟಿ ಇನ್ನ , ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಕಬಡ್ಡಿ ಜಯ ಶೆಟ್ಟಿ , ಯಕ್ಷಗಾನ ಕಲಾವಿದ-ಅರ್ಥಧಾರಿ ವಾಸು ಶೆಟ್ಟಿ ಮಾರ್ನಾಡ್, ಯಕ್ಷಗಾನ ಭಾಗವತ ಮೋಹನ್ ದಾಸ ರೈ, ಯಕ್ಷಗಾನ ಮದ್ದಳೆವಾದಕ ಹರೀಶ್ ಸಾಲ್ಯಾನ್, ಸುಕುಮಾರ್ ಶೆಟ್ಟಿ ಆಂಡಾರ್, ಬಂಟರ ಸಂಘ ಮುಂಬಯಿ ಸಿಟಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಪದಾಧಿಕಾರಿ ಸುಚಿತಾ ಶೆಟ್ಟಿ, ಬಂಟರ ಸಂಘಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಪ್ರವೀಣಾ ಪ್ರಕಾಶ್ ಶೆಟ್ಟಿ ಮತ್ತು ಶೋಭಾ ಶೆಟ್ಟಿ, ಹರಿಣಿ ಶೆಟ್ಟಿ , ನಯನಾ ಶೆಟ್ಟಿ ,ರಮಣಿ ಶೆಟ್ಟಿ, ಪ್ರಶುಲ್ ಶೆಟ್ಟಿ ,ಅನ್ವಿ ಶೆಟ್ಟಿ ,ಪ್ರಯುಕ್ತಿ ಶೆಟ್ಟಿ, ತನಿಷ್ಠಾ ಶೆಟ್ಟಿ ,ಪ್ರಾನ್ಯಾ ಶೆಟ್ಟಿ ಹಾಗೂ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಶಿಷ್ಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬಂಟರ ಸಂಘ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಯಕ್ಷಗಾನ ಸಮ್ಮೇಳನ ವ್ಯವಸ್ಥಾಪನಾ ಸಮಿತಿಯ ನಿಯೋಜಿತ ಪ್ರಧಾನ ಕಾರ್ಯದರ್ಶಿ ಅಶೋಕ್ ಪಕ್ಕಳ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
1 ಲಕ್ಷ ರೂ. ದೇಣಿಗೆ ಘೋಷಣೆ
ಇದೇ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ವೈಯಕ್ತಿಕವಾಗಿ 1 ಲಕ್ಷ ರೂ. ದೇಣಿಗೆಯನ್ನು ಘೋಷಿಸಿ ಸಮ್ಮೇಳನದ ಯಶಸ್ಸಿಗೆ ಶುಭಹಾರೈಸಿದರು.
ಸಮ್ಮೇಳನದಲ್ಲಿ ಯಕ್ಷಗಾನ ಕಲೆ-ಕಲಾವಿದರಿಗೆ ಸಂಬಂಧಿಸಿದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದಕ್ಕಾಗಿ ಸರ್ವ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದ ಕಲಾವಿದರು, ಕಲಾಪೋಷಕರು, ಕಲಾಭಿಮಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರ ಸಮಾಗಮ ಎಂಬಂತೆ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ – ಅಶೋಕ್ ಪಕ್ಕಳ, ರೂವಾರಿ, ತ್ರಿರಂಗ ಸಂಗಮ

