ಉಡುಪಿ : ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣ ಕಲ್ಪಿಸುತ್ತದೆ. ಪೋಷಕರನ್ನು ಕಳೆದುಕೊಂಡ, ಪಾಲನೆ ಪೋಷಣೆ ವಂಚಿತ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆದು ದತ್ತು ನೀಡಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಸೋಮವಾರ ಕಚೇರಿಯಲ್ಲಿ ಬೆಂಗಳೂರು, ಆಂಧ್ರಪ್ರದೇಶ (ತೆಲಂಗಾಣ) ಹಾಗೂ ಉಡುಪಿ ಜಿಲ್ಲೆಯ ದಂಪತಿಗೆ ಮೂವರು ಮಕ್ಕಳ ಅಂತಿಮ ದತ್ತು ಆದೇಶ ನೀಡಿದರು.
ದತ್ತು ಪಡೆಯಲು ಇಚ್ಛಿಸುವ ದಂಪತಿಗಳು ಕಾನೂನು ಬದ್ಧವಾಗಿ ದತ್ತು ಪ್ರಕ್ರಿಯೆ ಮೂಲಕ ದತ್ತು ಪಡೆಯಬೇಕು. ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಎಸೆಯದೇ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಬಹುದಾಗಿದೆ.
ಜಿಲ್ಲೆಯ ಸಂತೆಕಟ್ಟೆಯ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರ ಹಾಗೂ ಸರ್ಕಾರಿ ಮಹಿಳಾ ಆಸ್ಪತ್ರೆಯಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ. ಅನಧಿಕೃತವಾಗಿ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಕೊಂಡುಕೊಂಡವರಿಗೆ 1 ಲಕ್ಷ ದಂಡ ಹಾಗೂ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ರಕ್ಷಣಾಧಿಕಾರಿ ಸುರಕ್ಷಾ ಹಾಗೂ ಮಹೇಶ್ ದೇವಾಡಿಗ, ಕೃಷ್ಣಾನುಗೃಹ ವಿಶೇಷ ದತ್ತು ಕೇಂದ್ರದ ವೃಂದಾ ಉಪಸ್ಥಿತರಿದ್ದರು.

